ಹೊಸದಿಗಂತ ವರದಿ ಅಂಕೋಲಾ:
ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾಗಿ ಸುಮಾರು 72 ದಿನಗಳ ನಂತರ ಚಾಲಕ ಅರ್ಜುನ್ ಮೃತ ದೇಹದೊಂದಿಗೆ ಪತ್ತೆಯಾದ ಕೇರಳದ ಭಾರತ್ ಬೆಂಜ್ ಲಾರಿಯನ್ನು ಸಂಪೂರ್ಣವಾಗಿ ಮೇಲಕ್ಕೆ ಎತ್ತಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಾಕಲಾಗಿದ್ದು ಲಾರಿಯಲ್ಲಿ ಪತ್ತೆಯಾದ ವಸ್ತುಗಳು ಒಂದು ಕ್ಷಣ ಸ್ಥಳದಲ್ಲಿ ನೆರೆದವರ ಕಣ್ಗಾಲಿಯನ್ನು ತೇವಗೊಳಿಸಿತು.
ಅರ್ಜುನ ತನ್ನ ಪುಟ್ಟ ಮಗನಿಗಾಗಿ ಖರೀದಿಸಿ ತಂದಿದ್ದ ಆಟಿಕೆ ಸಾಮಗ್ರಿಗಳು ಲಾರಿಯಲ್ಲಿ ದೊರಕಿದ್ದು ಆಟಿಕೆ ಮಗನಿಗೆ ಕೊಟ್ಟು ಆ ಪುಟ್ಟ ಕಂದನ ಖುಷಿಯನ್ನು ಕಾಣುವ ಅರ್ಜುನ್ ಆಶೆ ಆತನ ಸಮೇತ ಗಂಗಾವಳಿ ನದಿ ನೀರ ಪಾಲಾಗಿಸಿದ ವಿಧಿಯ ಅಟ್ಟಹಾಸಕ್ಕೆ ಸ್ಥಳದಲ್ಲಿ ಜಮಾಯಿಸಿದ ಜನರು ಮರುಗಿದರು.
ಅರ್ಜುನ ಅವರ ಶರ್ಟ್, ಮೊಬೈಲ್ ಪೋನ್ ಮತ್ತಿತರ ವಸ್ತುಗಳನ್ನು ಅವರ ಸಹೋದರ ಗುರುತಿಸಿದ್ದು, ಹಿರಿಯ ಸಹೋದರ ಭಾವುಕರಾಗಿ ಅರ್ಜುನ್ ನನಗೆ ತಮ್ಮನಾದರೂ ಮಗುವಿನಂತೆ ಇದ್ದ ನಾವು ಅವನನ್ನು ಮಗನಂತೆ ಕಾಣುತ್ತಿದ್ದೇವು ಆತನನ್ನು ಈ ರೀತಿಯಲ್ಲಿ ಕಳೆದುಕೊಳ್ಳುತ್ತೇವೆ ಎಂದು ಗೊತ್ತೇ ಇರಲಿಲ್ಲ ಎಂದು ಕಣ್ಣೀರು ಹಾಕಿದರು.
ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಜ್ ಲಾರಿ ದುರಂತದಲ್ಲಿ ಛಿದ್ರಗೊಂಡರೂ ಆತ ತನ್ನ ಮಗನಿಗಾಗಿ ಖರೀದಿಸಿ ತಂದಿದ್ದ ಆಟಿಕೆಯ ಲಾರಿ ಉತ್ತಮ ಸ್ಥಿತಿಯಲ್ಲಿ ಇರುವುದು ವಿಧಿಯ ಕೈ ಚಳಕದಂತೆ ಕಂಡು ಬಂತು.