ಹೊಸದಿಗಂತ ಅಂಕೋಲಾ:
ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಮೃತ ಪಟ್ಟವರಿಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚುವರಿ 2 ಲಕ್ಷ ಮತ್ತು ಗಾಯಗೊಂಡವರಿಗೆ 50 ಸಾವಿರ ಪರಿಹಾರ ಹಣ ಮಂಜೂರು ಮಾಡಲಾಗಿದೆ.
ಶಿರೂರು ಗುಡ್ಡ ಕುಸಿತ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಘಟನೆಯ ಕುರಿತು ವಿವರಗಳನ್ನು ನೀಡಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಕೇಂದ್ರ ಸರ್ಕಾರದ ಪರಿಹಾರ ನಿಧಿಯಿಂದ ಹಣ ನೀಡುವಂತೆ ಮನವಿ ಮಾಡಿದ್ದರು.
ಸಂಸದರ ಮನವಿಯನ್ನು ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಶಿರೂರು ಗುಡ್ಡ ಕುಸಿತ ಘಟನೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ಬಿಡುಗಡೆಗೆ ಅನುಮೋದನೆ ನೀಡಿದ್ದರು.
ಇದೀಗ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಶಿರೂರು ದುರಂತದಲ್ಲಿ ಮೃತ ಪಟ್ಟವರಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ಹಣ ಮಂಜೂರಿ ಮಾಡಲಾಗಿದ್ದು ಅಗತ್ಯ ದಾಖಲೆಗಳನ್ನು ಪಡೆದು ಸಂತ್ರಸ್ತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು ಎಂದು ತಿಳಿದು ಬಂದಿದೆ.