ಹೊಸ ದಿಗಂತ ವರದಿ,ಅಂಕೋಲಾ:
ಇಲ್ಲಿನ ಶಿರೂರು ಬಳಿ ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿ ಪಾಲಾಗಿರುವ ಮೂವರು ವ್ಯಕ್ತಿಗಳು ಮತ್ತು ವಾಹನಗಳ ಶೋಧ ಕಾರ್ಯ ಬುಧವಾರ ದಿನ ಮುಂದುವರಿಯಿತಾದರೂ ಯಾವುದೇ ರೀತಿಯ ಯಶಸ್ಸು ಸಿಗಲಿಲ್ಲ.
ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ಇಳಿಕೆ ಆಗಿರುವ ಕಾರಣ ಜಿಲ್ಲಾಡಳಿತದ ಅನುಮತಿ ಪಡೆದು ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಮಂಗಳವಾರ ಸಂಜೆ ಕಾರ್ಯಾಚರಣೆಗೆ ಇಳಿದ ಸಂದರ್ಭದಲ್ಲಿ ಕೇರಳದ ಭಾರತ ಬೆಂಜ್ ಲಾರಿಯ ಜಾಕ್ ನದಿಯಲ್ಲಿ ಮಣ್ಣಿನ ಅಡಿಯಲ್ಲಿ ಪತ್ತೆಯಾಗಿತ್ತು.
ಇದರಿಂದಾಗಿ ಬುಧವಾರದ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿತ್ತು.
ಬುಧವಾರ ಬೆಳಗ್ಗೆಯಿಂದ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ, ಎನ್. ಡಿ.ಆರ್. ಎಫ್, ಎಸ್. ಡಿ.ಆರ್. ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯ ಮೀನುಗಾರರು ಜಂಟಿಯಾಗಿ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದ್ದು , ಭಾರತ್ ಬೆಂಜ್ ಲಾರಿಯ ಜಾಕ್ ಪತ್ತೆಯಾದ ಸ್ಥಳದಲ್ಲಿ ಹಲವಾರು ಭಾರಿ ಮುಳುಗಿ ಶೋಧ ನಡೆಸಲಾಯಿತು.
ಸತತ ಶೋಧ ನಡೆಸಿದ ನಂತರವೂ ಆ ಭಾಗದಲ್ಲಿ ಬೇರೆ ಏನು ದೊರಕದಿರುವುದರಿಂದ ಆ ಸ್ಥಳದಲ್ಲಿ ಲಾರಿ ಇಲ್ಲ ಎನ್ನುವುದು ತಿಳಿದು ಬಂದಿದೆ.
ನದಿಯ ಬೇರೆ ಭಾಗಗಳಲ್ಲಿ ಕೂಡ ಶೋಧ ಕಾರ್ಯ ನಡೆಸಲಾದರೂ ಯಾವುದೇ ಸುಳಿವುಗಳು ದೊರಕಿಲ್ಲ . ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್, ಕೇರಳ ಮಂಜೇಶ್ವರ ಶಾಸಕ ಅಶ್ರಫ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸ್ಥಳದಲ್ಲಿ ಉಪಸ್ಥಿತರಿದ್ದರು.
ನದಿಯಲ್ಲಿ ಮಣ್ಣು ರಾಶಿಯ ಅಡಿಯಲ್ಲಿ ಲಾರಿ ಇದ್ದು ಅದರ ಮೇಲೆ ಕಲ್ಲು ಬಂಡೆಗಳು ಬಿದ್ದಿರುವ ಸಾಧ್ಯತೆ ಇದ್ದು ಗೋವಾದಿಂದ ಡ್ರೆಜ್ಜರ್ ಯಂತ್ರ ತಂದು ನದಿಯಲ್ಲಿ ರಾಶಿ ಬಿದ್ದಿರುವ ಮಣ್ಣು ತೆರುವು ಕಾರ್ಯಾಚರಣೆ ಮಾಡಲಾಗುವುದು ಎಂದು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.
ಈ ಕುರಿತು ಗೋವಾ ಬಂದರು ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.