ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದಿಂದಾಗಿ ಕಣ್ಮರೆಯಾಗಿರುವ ಮೂವರು ಮತ್ತು ನದಿ ಪಾಲಾಗಿರುವ ವಾಹನಗಳ ಶೋಧಕ್ಕೆ ಮಂಗಳವಾರ ಸಂಜೆ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ಶುರು ಮಾಡಿದ್ದು ನಾಪತ್ತೆಯಾಗಿರುವ ಕೇರಳದ ಅರ್ಜುನ್ ಲಾರಿಯ ಜ್ಯಾಕ್ ಮತ್ತು ಬೇರೆ ವಾಹನಗಳ ಬಿಡಿಭಾಗಗಳು ಪತ್ತೆಯಾಗಿವೆ.
ಶಾಸಕ ಸತೀಶ ಸೈಲ್ ಬಂದು ಮಂಗಳವಾರ ಸಂಜೆ 3.30 ಕ್ಕೆ ಕಾರ್ಯಾಚರಣೆ ಶುರು ಮಾಡಲು ಸೂಚಿಸಿದರು.
ಅದರಂತೆ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಲವು ಬಾರಿ ಗಂಗಾವಳಿ ನದಿಯಲ್ಲಿ ಮುಳುಗಿ ಈ ವಸ್ತುಗಳನ್ನು ಎತ್ತಿದ್ದಾರೆ.
ಮಳೆ ನಿಂತು ಬಿಸಿಲು ಬಿದ್ದಿರುವುದು ಮತ್ತು ನದಿ ನೀರಿನ ಮಟ್ಟ ಇಳಿದಿರುವುದು ಕಾರ್ಯಾಚರಣೆಗೆ ಅನುಕೂಲವಾಗಿದೆ.
ಕೇರಳ ಲಾರಿ ಚಾಲಕ ಜ್ಯಾಕ್ ತನ್ನ ಲಾರಿಯದ್ದು ಎಂದು ತಿಳಿಸಿದ್ದಾನೆ.
ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭವಾಗಲಿದೆ.
ಜುಲೈ 16 ರಂದು ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ್ದು ಘಟನೆ ನಡೆದು ಸುಮಾರು ಒಂದು ತಿಂಗಳು ಸಮೀಪಿಸಿದೆ.
ಗುಡ್ಡ ಕುಸಿತ ಸಂಭವಿಸಿದ ಸುಮಾರು 16 ದಿನಗಳ ವರೆಗೆ ಶೋಧ ಕಾರ್ಯ ನಡೆಸಲಾಗಿತ್ತಾದರೂ ಭಾರೀ ಮಳೆಯಿಂದಾಗಿ ಗಂಗಾವಳಿ ನದಿಯ ಒಳ ಹರಿವು ಹೆಚ್ಚಾಗಿ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿದ್ದರಿಂದ ಶೋಧ ಕಾರ್ಯ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.