Wednesday, June 29, 2022

Latest Posts

ರಾಜ್ಯದ ಗಡಿಯಲ್ಲಿ ಅಶಾಂತಿ ಸೃಷ್ಟಿಸುವ ಎಂಇಎಸ್ – ಶಿವಸೇನೆ ನಿಷೇಧಕ್ಕೆ ಆಗ್ರಹ

ಹೊಸದಿಗಂತ ವರದಿ,ಚಿಕ್ಕಮಗಳೂರು:

ರಾಜ್ಯದ ಗಡಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರನ್ನು ಎತ್ತಿಕಟ್ಟಿ ದ್ವೇಷದ ವಾತಾವರಣ ಮೂಡಿಸಿ ಅಶಾಂತಿಗೆ ಯತ್ನಿಸುತ್ತಿರುವ ಎಂಇಎಸ್ ಹಾಗೂ ಶಿವಸೇನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನೂರಾರು ಕರವೇ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಿಂದ ಸಾಗಿ ಎಂಇಎಸ್ ಹಾಗೂ ಶಿವಸೇನೆ ವಿರುದ್ದ ಧಿಕ್ಕಾರದ ಘೋಷಣೆ ಕೂಗುತ್ತಾ ತಾಲ್ಲೂಕು ಕಛೇರಿ ಮುತ್ತಿಗೆ ಹಾಕಲು ಯತ್ನಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ಮಹಾರಾಷ್ಟ್ರ ರಾಜಕಾರಣಿಗಳು ಅಲ್ಲಿನ ಸರ್ಕಾರಗಳ ಪ್ರಚೋದನೆಯಿಂದ ಬೆಳಗಾವಿಯಲ್ಲಿ ಪದೇ ಪದೇ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇತ್ತೀಚಿಗೆ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ಅಪಮಾನ ಮಾಡುವುದಲ್ಲದೇ ಸ್ವಾತಂತ್ರ್ಯ ಹೋರಾಟಗಾರ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಭಗ್ನಗೊಳಿಸಿ ಕೋಮುದ್ವೇಷ ಉಂಟಾಗುವಂತೆ ಮಾಡಿರುವುದು ಖಂಡನೀಯ ಎಂದರು.
ಕರ್ನಾಟಕ ಸರ್ಕಾರದ ವಿರುದ್ಧ ಮಾನಹಾನಿಕರ ಪ್ರಚೋಧನಾತ್ಮಕ ಭಾಷಣಗಳನ್ನು ಮಾಡುವುದರ ಪರಿಣಾಮದಿಂದ ಬೆಳಗಾವಿಯಲ್ಲಿನ ಕನ್ನಡಿಗರು, ಮರಾಠಿಗರು ನೆಮ್ಮದಿ, ಶಾಂತಿಯಿಂದ ಬಾಳಲು ಸಾಧ್ಯವಾಗುತ್ತಿಲ್ಲ. ಅವರು ಈಗಾಗಲೇ ಎಂಇಎಸ್ ಹಾಗೂ ಶಿವಸೇನೆಗಳನ್ನು ತಿರಸ್ಕರಿಸಿದ್ದು, ಹತಾಶೆಗೆ ಒಳಗಾದ ಈ ಸಂಘಟನೆಗಳು ಹಿಂಸಾಚಾರಕ್ಕೆ ಮುಂದಾಗಿವೆ ಎಂದು ವಾಗ್ದಾಳಿ ನಡೆಸಿದರು.
ಮಾನವತವಾದಿ ಬಸವಣ್ಣನವರ ಭಾಚಿತ್ರಕ್ಕೆ ಮಸಿಬಳಿಯುವುದು, ಪ್ರತಿಮೆ ಭಗ್ನಗೊಳಿಸುವುದು, ಇಡೀ ಮಾನವ ಕುಲಕ್ಕೆ ಮಾಡಿದ ಅಪಮಾನವಾಗಿದೆ. ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿನ ಕನ್ನಡಿಗರ ಆತ್ಮಾಭಿಮಾನದ ಸಂಕೇತವಾಗಿರುವ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು, ಕರ್ನಾಟಕ ವಾಹನಗಳಿಗೆ ಕಲ್ಲು ತೂರಾಟ ಮಾಡಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಅಪಾರ ನಷ್ಟ ಉಂಟು ಮಾಡಿದೆ, ಇಂತಹ ಭಯೋತ್ಪಾದಕಯನ್ನು ಹೊಂದಿರುವ ಸಂಘಟನೆಗಳನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಕರವೇ ಜಿಲ್ಲಾ ಉಪಾಧ್ಯಕ್ಷ ದಶರಥರಾಜ್ ಅರಸ್, ಕಾರ್ಯದರ್ಶಿ ಪಂಚಾಕ್ಷರಿ, ಹಾಲೇಶ್, ಓಂಕಾರಸ್ವಾಮಿ, ಯುವಘಟಕದ ಜಿಲ್ಲಾಧ್ಯಕ್ಷ ಕುಮಾರ್‌ಆರ್.ಶೆಟ್ಟಿ, ಮಧುಸೂದನ್ ಸೇರಿದಂತೆ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss