ಅಲ್ಲಾಡಿದೆ ‘ಮಹಾ’ ಅಗಡಿಯ ಅಡಿಪಾಯ, ಸೂರತ್ತಿನಲ್ಲಿ ಶಿವಸೇನೆ ಬಂಡಾಯ ಶಾಸಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಹಾರಾಷ್ಟ್ರದ ವಿಧಾನ ಪರಿಷತ್‌ ಚುನಾವಣೆ ಬೆನ್ನಲ್ಲೇ ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಆಡಳಿತಾರೂಢ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಬಂಡಾಯ ಶಾಸಕರು ಸೂರತ್‌ನ ರೆಸಾರ್ಟ್‌ ಒಂದರಲ್ಲಿ ಬೀಡುಬಿಟ್ಟಿದ್ದಾರೆ.

ಇದು ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್‌ ಆಘಾಡಿ (ಶಿವಸೇನೆ-ಕಾಂಗ್ರೆಸ್‌ ಮೈತ್ರಿಕೂಟ) ಗೆ ಭಾರಿ ಆಘಾತವನ್ನುಂಟು ಮಾಡಿದೆ. ಪ್ರಸ್ತುತ ಸರ್ಕಾರದಲ್ಲಿ ಮಂತ್ರಿಯಾಗಿರುವ ಏಕನಾಥ ಶಿಂಧೆಯವರು ರೆಬೆಲ್‌ ಶಾಸಕರೊಂದಿಗೆ ರೆಸಾರ್ಟ್‌ ಒಂದರಲ್ಲಿ ಬೀಡು ಬಿಟ್ಟಿದ್ದಾರೆ. ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.

ಹೀಗೆ ಏಕಾ ಏಕಿ ಪಕ್ಷದ ಶಾಸಕರು ನಾಪತ್ತೆಯಾಗಿರುವುದರಿಂದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಫಜೀತಿಯಲ್ಲಿ ಸಿಲುಕಿದ್ದಾರೆ. ಇನ್ನೊಂದೆಡೆ ಪ್ರತಿಪಕ್ಷ ಬಿಜೆಪಿಯ ನಾಯಕ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ದೆಹಲಿಯೆಡೆಗೆ ದೌಡಾಯಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಪಾಳಯದಲ್ಲಿ ಬಿರುಸಿನ ಬೆಳವಣಿಗೆಗಳು ನಡೆಯುತ್ತಿವೆ ಎನ್ನಲಾಗಿದೆ. ಗೃಹ ಸಚಿವ ಅಮಿತ್‌ ಶಾ ಹಾಗೂ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾರವರು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು ಫಡ್ನವೀಸ್‌ ಅವರನ್ನು ಭೇಟಿ ಮಾಡಲಿದ್ದಾರೆ.

ಇನು ಈ ಬೆಳವಣಿಗೆಯ ಕುರಿತು ಬಹಿರಂಗವಾಘಿ ಮಾತನಾಡುವುದಿಲ್ಲ ಎಂದು ಮಹಾರಾಷ್ಟ್ರದ ಕಾಂಗ್ರಸ್‌ ನಾಯಕರೊಬ್ಬರು ಹೇಳಿದ್ದಾರೆ. ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಏಕನಾಥ್ ಶಿಂಧೆ ಠಾಕ್ರೆಯವರಿಗೆ ಒತ್ತಾಯಿಸಲಿದ್ದಾರೆ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಒಟ್ಟಾರೆಯಾಗಿ ಆಡಳಿತಾರೂಢ ಸರ್ಕಾರ ಬಹುತೇಕ ಡೋಲಾಯಮಾನ ಸ್ಥಿತಿಗೆ ತಲುಪಿದೆ.

ಆಗಿದ್ದೇನು?
ಸದ್ಯವಷ್ಟೇ ನಡೆದ ಮಹಾರಾಷ್ಟ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ಬಿಜೆಪಿ 5 ಸ್ಥಾನಗಳನ್ನು ಬಾಚಿಕೊಂಡಿತ್ತು. ಶಿವಸೇನೆ, ಎನ್‌ಸಿಪಿಗೆ ತಲಾ ಎರಡು ಸ್ಥಾನಗಳು ಲಭಿಸಿದ್ದರೆ ಕಾಂಗ್ರೆಸ್‌ ಗೆ ಒಂದು ಸ್ಥಾನ ಲಭಿಸಿತ್ತು. ಚುನಾವಣೆಯಲ್ಲಿ ನಡೆದ ಅಡ್ಡಮತದಾನವು ಬಿಜೆಪಿಗೆ ಲಾಭವುಂಟು ಮಾಡಿತ್ತು. ಇದು ಎಂವಿಎ ಮೈತ್ರಿಕೂಟಕ್ಕೆ ಭಾರೀ ಮುಖಭಂಗವುಂಟು ಮಾಡಿತ್ತು. ಅಡ್ಡಮತದಾನ ನಡೆದಿರುವ ಬಗ್ಗೆ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಮುಂಚಿನಿಂದಲೂ ಹೊಗೆಯಾಡುತ್ತಿದ್ದ ಅಸಮಾಧಾನವು ವಿಧಾನ ಸಭೆಯ ಚುನಾವಣೆಯ ಬೆನ್ನಲ್ಲೇ ಸ್ಫೋಟಗೊಂಡಿದೆ.

ಪ್ರಸ್ತುತ ಸೂರತ್‌ನ ರೆಸಾರ್ಟ್‌ ಒಂದರಲ್ಲಿ 26 ಶಾಸಕರು ತಂಗಿದ್ದಾರೆ ಎನ್ನಲಾಗಿದೆ. ಎರಡೂ ಕಡೆಯ ಪಕ್ಷಗಳಲ್ಲಿ ಭಾರಿ ಚಟುವಟಿಕೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ “ಮಹಾರಾಷ್ಟ್ರದ ಜನರಿಗೆ ಯಾವುದು ಸರಿಯೋ ಅದನ್ನು ಮಾಡಲಾಗುವುದು. ಅಧಿಕಾರಕ್ಕಿಂತ ಅವರ ಹಿತಾಸಕ್ತಿ ಮುಖ್ಯವಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಬೇಕಾದರೆ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿ ಶೀಘ್ರದಲ್ಲೇ ಹಕ್ಕು ಸಾಧಿಸಲಿದೆ” ಎಂದು ಬಿಜೆಪಿ ನಾಯಕ ಪ್ರವೀಣ್ ದಾರೇಕರ್ ಹೇಳಿದ್ದಾರೆ.

ಇಂದು ಮಧ್ಯಾಹ್ನ 2 ಗಂಟೆಗೆ ಬಂಡಾಯ ಶಾಸಕ ಏಕನಾಥ ಶಿಂಧೆಯವರು ಪತ್ರಿಕಾ ಗೋಷ್ಟಿ ನಡೆಸಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!