ಸ್ಪೈಸ್ ಜೆಟ್ ಏರ್‌ವೇಸ್‌ ನ 80 ಪೈಲಟ್‌ ಗಳಿಗೆ ಶಾಕ್: 3 ತಿಂಗಳು ವೇತನ ನೀಡದೇ ಮನೆಗೆ ಕಳುಹಿಸಲು ಸಿದ್ಧತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸ್ಪೈಸ್ ಜೆಟ್ ಏರ್‌ವೇಸ್‌ ತನ್ನ 80 ಪೈಲಟ್‌ ಗಳಿಗೆ ಶಾಕ್ ನೀಡಿದ್ದು, ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ರಜೆಯಲ್ಲಿ ಕಳುಹಿಸಲು ನಿರ್ಧರಿಸಿದೆ.

ಈ ಬಗ್ಗೆ ಸ್ವತಃ ಸ್ಪೈಸ್ ಜೆಟ್ ಏರ್‌ವೇಸ್‌ ಹೇಳಿಕೊಂಡಿದ್ದು, ಈಗಾಗಲೇ ಸಾಕಷ್ಟು ಪೈಲಟ್‌ಗಳನ್ನು ಸಂಸ್ಥೆ ಹೊಂದಿದ್ದು, ಈ ಕಾರಣಕ್ಕೆ ಹೆಚ್ಚಿರುವ ಪೈಲಟ್‌ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ಮನೆಗೆ ಕಳುಹಿಸಲು ವಿಮಾನಯಾನ ಸಂಸ್ಥೆ ನಿರ್ಧರಿಸಿದೆ.

ಕೆಲ ಮೂಲಗಳ ಪ್ರಕಾರ ಬೋಯಿಂಗ್ 737 ವಿಭಾಗದ 40 ಪೈಲಟ್‌ಗಳು ಹಾಗೂ Q400 ವಿಭಾಗದ 40 ಪೈಲಟ್‌ಗಳು ಹೀಗೆ ಒಟ್ಟು 80 ಪೈಲಟ್‌ಗಳನ್ನು ಹೀಗೆ ದೀರ್ಘ ರಜೆ ಮೇಲೆ ಮನೆಗೆ ಕಳುಹಿಸಲು ಏರ್‌ಲೈನ್ಸ್ ಸಿದ್ಧತೆ ನಡೆಸಿದೆ.

ಪ್ರಾದೇಶಿಕ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ವಿಮಾನಗಳಲ್ಲಿ ಒಟ್ಟು 80 ಪೈಲಟ್‌ಗಳನ್ನು ಮೂರು ತಿಂಗಳವರೆಗೆ ವೇತನ ರಹಿತ ರಜೆಯ ಮೇಲೆ ಹೋಗಲು ಆದೇಶಿಸಲಾಗಿದೆ. ಡಿಸೆಂಬರ್‌ನಲ್ಲಿ ಏಳು ಹೊಸ ಬೋಯಿಂಗ್ 737 ಮ್ಯಾಕ್ಸ್ ಅನ್ನು ಸೇರಿಸಲು ಏರ್‌ಲೈನ್ ಮುಂದಾಗಿದ್ದು, ಹೊಸ ಮಾರ್ಗದ ಹಾರಾಟ ಶುರು ಮಾಡಿದರೆ ಈ ಪೈಲಟ್‌ಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದ್ದಾಗಿ ವರದಿ ಆಗಿದೆ.

ಇದಲ್ಲದೇ ಹೊಸ ವಿಮಾನಗಳು ಬರುವವರೆಗೆ ಇದು, ಕಡಿಮೆ ಸಂಖ್ಯೆಯ ಸಿಬ್ಬಂದಿ ಬಳಸಿಕೊಂಡು ವಿಮಾನ ಹಾರಾಟ ನಡೆಸಲು ಮುಂದಾಗಿದೆ.

ವೆಟ್-ಲೀಸ್ಡ್ ವಿಮಾನಗಳಿಗೆ ಹೆಚ್ಚಿನ ಪೈಲಟ್‌ಗಳ ಅಗತ್ಯವಿಲ್ಲ ಏಕೆಂದರೆ ಅವುಗಳನ್ನು ಬಾಡಿಗೆಗೆ ಪಡೆಯುವ ಏರ್‌ಲೈನ್‌ನ ಸಿಬ್ಬಂದಿ ನಿರ್ವಹಿಸುತ್ತಾರೆ. 2021 ಆರಂಭದಲ್ಲಿ ಈ ಸ್ಪೈಸ್ ಜೆಟ್ ಏರ್‌ಲೈನ್, 95 ವಿಮಾನಗಳನ್ನು ಹೊಂದಿತ್ತು. ಆದರೆ ಈಗ ಕೇವಲ 50 ವಿಮಾನಗಳನ್ನು ಹೊಂದಿದೆ. ಹಲವು ವಿಮಾನಗಳನ್ನು ಅದು ಲೀಸ್‌ ಪಡೆಯುವವರಿಗೆ ನೀಡಿದೆ. ಮತ್ತೆ ಕೆಲವು ನಿರ್ವಹಣಾ ಕಾರಣಕ್ಕೆ ಹಾರಾಟ ನಡೆಸುತ್ತಿಲ್ಲ. ಹೀಗಾಗಿ ಹೆಚ್ಚಿನ ಪೈಲಟ್‌ಗಳನ್ನು ಇರಿಸಿಕೊಂಡು ಸಂಸ್ಥೆಯನ್ನು ನಷ್ಟದಲ್ಲಿ ಮುನ್ನಡೆಸುವುದಲ್ಲಿ ಯಾವುದೇ ಅರ್ಥವಿಲ್ಲ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೊಸ ವಿಮಾನಗಳು ಆಗಮಿಸಿದ ನಂತರ ಪೈಲಟ್‌ಗಳನ್ನು ಮತ್ತೆ ಕರೆಸಲಾಗುವುದು ಎಂದು ಸ್ಪೈಸ್ ಜೆಟ್ ಹೇಳಿದ್ದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಪ್ರಸ್ತುತ ಸ್ಪೈಸ್ ಜೆಟ್, ಜೆಟ್ ಏರ್‌ವೇಸ್‌ನಿಂದ ಪಡೆದ 737 ಹಳೆಯ ವಿಮಾನಗಳನ್ನು ವಾಪಸ್ ಕಳುಹಿಸುತ್ತಿದೆ. ಆದರೆ ಲೀಸ್‌ಗೆ ಪಡೆದವರು ನಾಲ್ಕು ವಿಮಾನಗಳನ್ನು ವಾಪಸ್ ನೀಡುತ್ತಿದ್ದಾರೆ. ಇದರ ಜೊತೆಗೆ ಸುಮಾರು ಹತ್ತು Q400 ವಿಮಾನಗಳನ್ನು ಬಿಡಿಭಾಗಳು ಸಿಗದ ಕಾರಣಕ್ಕೆ ನಾಶ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!