ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಷ್ಪಾ 2 ಚಿತ್ರ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದೆ. ಈಗಾಗಲೇ ಬಿಡುಗಡೆಗೂ ಮುನ್ನವೇ ಹಲವು ದಾಖಲೆ ಬರೆದಿದೆ. ಡಿಸೆಂಬರ್ 5 ರಂದು ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಪುಷ್ಪಾ 2 ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಇತ್ತ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ದೇಶದ ಪ್ರಮುಖ ನಗರ, ಪಟ್ಟಣಗಳಲ್ಲಿ ಪ್ರಮೋಶನ್ ಮಾಡುತ್ತಿದ್ದಾರೆ. ಇದರ ನಡುವೆ ಅಲ್ಲು ಅರ್ಜುನ್ ಹಾಗೂ ಪುಷ್ಪಾ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗಿದೆ. ನಟ ಅಲ್ಲು ಅರ್ಜುನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಂಬೈನಲ್ಲಿ ಪುಷ್ಪಾ 2 ಚಿತ್ರದ ಪ್ರಮೋಶನ್ ವೇಳೆ ನಟ ಅಲ್ಲು ಅರ್ಜುನ್ ಆಡಿದ ಮಾತುಗಳೇ ಇದೀಗ ಮುಳುವಾಗಿದೆ. ಮುಂಬೈನಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಚಿತ್ರದ ಪ್ರಮೋಶನ್ ನಡೆಸಿದ್ದರು. ಕಿಕ್ಕಿರಿದು ಅಭಿಮಾನಿಗಳು ತುಂಬಿದ್ದರು. ಈ ವೇಳೆ ಅಲ್ಲು ಅರ್ಜುುನ್ ಅಭಿಮಾನಿಗಳ ಕುರಿತು ಹೆಮ್ಮೆಯಿಂದ ಮಾತನಾಡಿದ್ದರು. ನನಗೆ ಅಭಿಮಾನಿಗಳಿಲ್ಲ. ನನಗಿರುವುದು ಸೇನೆ(ಆರ್ಮಿ). ಈ ಸೇನೆ ಯಾವತ್ತೂ ನನ್ನ ಜೊತೆಗೆ ನಿಲ್ಲುತ್ತದೆ ಎಂದಿದ್ದರು.
ಗ್ರೀನ್ ಪೀಸ್ ಹಾಗೂ ವಾಟರ್ ಹಾರ್ವೆಸ್ಟ್ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ್ ಗೌಡ್, ಇದೀಗ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಿಸಿದ್ದಾರೆ. ಹೈದರಾಬಾದ್‌ನ ಜವಾಹರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀನಿವಾಸ್ ಗೌಡ್ ತಮ್ಮ ದೂರಿನಲ್ಲಿ, ಅಲ್ಲು ಅರ್ಜುನ್ ಹೇಳಿಕೆಯನ್ನೇ ಪ್ರಶ್ನಿಸಿದ್ದಾರೆ. ಅಲ್ಲು ಅರ್ಜುನ್ ಸೇನೆ(ಆರ್ಮಿ) ಪದ ಬಳಕೆ ಮಾಡಿದ್ದಾರೆ. ಸೇನೆ ಪದಕ್ಕೆ ಭಾರತದಲ್ಲಿ ಅತ್ಯಂತ ಮಹತ್ವ ಹಾಗೂ ಗೌರವವಿದೆ. ಆರ್ಮಿ ಪದವನ್ನು ಈ ರೀತಿ ಅಭಿಮಾನಿಗಳಿಗೆ ಬಳಕೆ ಮಾಡುವುದು ಸರಿಯಲ್ಲ. ಅಭಿಮಾನಿಗಳ ಪಡೆ ಇರಬಹುದು. ಆದರೆ ಅಭಿಮಾನಿಗಳ ಸೇನೆಯಲ್ಲ. ಸೇನೆ ಇರುವುದು ಭಾರತೀಯ ಸೇನೆ ಮಾತ್ರ. ಈ ಸೇನೆ ಪದ ಭಾರತೀಯ ಯೋಧರು, ಭಾರತೀಯ ಸೇನಾಧಿಕಾರಿಗಳಿಗೆ ಮಾತ್ರ. ಹೀಗಾಗಿ ಅಲ್ಲು ಅರ್ಜುುನ್ ಸೇನೆ ಪದದ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಆರ್ಮಿ ಅನ್ನೋದು ಅತ್ಯಂತ ಗೌರವದ ಸೇವೆ. ಇದೇ ಆರ್ಮಿ ನಮ್ಮ ದೇಶವನ್ನು ಕಾಯುತ್ತಿದೆ. ಹೀಗಾಗಿ ಆರ್ಮಿ ಪದವನ್ನು ನಿಮ್ಮ ಅಭಿಮಾನಿಗಳಿಗೆ ಬಳಸಬೇಡಿ. ಈ ಪದದ ಗೌರವವಕ್ಕೆ ಧಕ್ಕೆ ತರಬೇಡಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರ್ಮಿ ಪದಲು ಅಭಿಮಾನಿಗಳಿಗೆ ಬಳಸಲು ಹಲವು ಪದಗಳಿವೆ ಎಂದು ಶ್ರೀನಿವಾಸ್ ಗೌಡ್ ಹೇಳಿದ್ದಾರೆ.