ಕೆನಡಾ ಪ್ರಧಾನಿ ಟ್ರುಡೊಗೆ ಶಾಕ್​: ಮಿತ್ರ ಪಕ್ಷದಿಂದಲೇ ಅವಿಶ್ವಾಸ ನಿರ್ಣಯಕ್ಕೆ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ವಿರೋಧಿ ನಿಲುವು ತಳೆದಿರುವ ಕೆನಡಾ ಪ್ರಧಾನಿ ಜಸ್ಟೀನ್​ ಟ್ರುಡೊಗೆ ಶಾಕ್​ ಎದುರಾಗಿದೆ. ಪ್ರಮುಖ ಮಿತ್ರಪಕ್ಷ ನ್ಯೂ ಡೆಮಾಕ್ರಟಿಕ್ (ಎನ್‌ಡಿಪಿ) ಸರ್ಕಾರದ ವಿರುದ್ಧ ಮುಂದಿನ ವರ್ಷ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದೆ.

ಟ್ರುಡೊರ ಲಿಬರಲ್​​ ಪಕ್ಷದ ಸರ್ಕಾರಕ್ಕೆ ಬೆಂಬಲ ನೀಡಿ ಕಿಂಗ್​ ಮೇಕರ್​​ ಎನ್ನಿಸಿಕೊಂಡಿದ್ದ ಭಾರತೀಯ ಸಂಜಾತ ಜಗ್ಮೀತ್ ಸಿಂಗ್ ಅವರ ಎನ್​ಡಿಪಿಯು ಸರ್ಕಾರದಲ್ಲಿ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ, ಸರ್ಕಾರದ ಪತನಕ್ಕೆ ಜಗ್ಮೀತ್ ಸಿಂಗ್ ಕರೆ ನೀಡಿ ಬಹಿರಂಗ ಪತ್ರ ಬರೆದಿದ್ದಾರೆ.

ಕೆನಡಾದಲ್ಲಿ ಮುಂದಿನ ವರ್ಷದ ಅಕ್ಟೋಬರ್​​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕು. ಆದರೆ, ಅದಕ್ಕೂ ಮೊದಲು ಸರ್ಕಾರವನ್ನು ಪತನಗೊಳಿಸಿ ಚುನಾವಣೆ ನಡೆಸಬೇಕು ಎಂದು ಎನ್​ಡಿಪಿ ಹೇಳಿದೆ.

ಭಾರತೀಯ ಸಂಜಾತ, ಕೆನಡಾದ ರಾಜಕಾರಣಿಯಾದ ಜಗ್ಮೀತ್ ಸಿಂಗ್ ಅವರು, ಟ್ರುಡೊ ಸರ್ಕಾರವು ಮುಂದುವರಿಯಲು ಮತ್ತು ಅದು ಮತ್ತೊಮ್ಮೆ ಚುನಾಯಿತವಾಗಲು ಅರ್ಹವಾಗಿಲ್ಲ ಎಂದು ಟೀಕಿಸಿದ್ದಾರೆ. ಈ ಕುರಿತು ಅವರು ಎಕ್ಸ್​ ಖಾತೆಯಲ್ಲಿ ಬಹಿರಂಗ ಪತ್ರ ಹಂಚಿಕೊಂಡಿದ್ದಾರೆ.

ಮುಂದಿನ ವರ್ಷ ಟ್ರುಡೊ ನೇತೃತ್ವದ ಲಿಬರಲ್ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಲಾಗುವುದು. ಎಲ್ಲ ವಿರೋಧ ಪಕ್ಷಗಳು ಇದರಲ್ಲಿ ಭಾಗವಹಿಸಿ ಟ್ರುಡೊ ವಿರುದ್ಧ ಮತ ಚಲಾಯಿಸಿ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ಟ್ರುಡೊ ಸರ್ಕಾರದಲ್ಲಿ ಉಪ ಪ್ರಧಾನ ಮಂತ್ರಿ ಹಾಗೂ ಹಣಕಾಸು ಸಚಿವೆಯಾಗಿದ್ದ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಸರ್ಕಾರವು ಭಾರೀ ವಿರೋಧ ಎದುರಿಸುತ್ತಿದೆ. ಟ್ರುಡೊ ರಾಜೀನಾಮೆ ನೀಡಬೇಕು ಎಂಬ ಕೂಗು ಬಲವಾಗಿದೆ. ಇದರ ನಡುವೆ, ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯೂ ಹೆಚ್ಚಿದೆ ಎಂದು ವರದಿಯಾಗಿದೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಗ್ಮೀತ್​ ಸಿಂಗ್​ ನೇತೃತ್ವದ ನ್ಯೂ ಡೆಮಾಕ್ರಟಿಕ್​​ ಪಾರ್ಟಿ (ಎನ್​ಡಿಪಿ) ಕಿಂಗ್​ ಮೇಕರ್​ ಆಗಿ ಹೊರಹೊಮ್ಮಿತ್ತು. ಪ್ರಧಾನಿ ಜಸ್ಟಿನ್​ ಟ್ರುಡೊ ಅಧಿಕಾರಕ್ಕೆ ಬರಲು ಎನ್​ಡಿಪಿ ಬೆಂಬಲ ನೀಡಿತ್ತು.

338 ಸ್ಥಾನಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲಿಬರಲ್​ ಪಕ್ಷವು 157 ಸ್ಥಾನ ಪಡೆದರೆ, ಪ್ರತಿಪಕ್ಷ ಕನ್ಸರ್ವೇಟಿವ್​ ಪಕ್ಷವು 121, ಬ್ಲ್ಯಾಕ್​ ಕ್ಯುಬೇಸಿಸ್​ 32, ಎನ್​​ಡಿಪಿ 24, ಗ್ರೀನ್ ಪಾರ್ಟಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಟ್ರುಡೊ ಅವರು ಎನ್​ಡಿಪಿ ಸಂಸದರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!