ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ಗೆ (ODI World Cup) ಬಿಸಿಸಿಐ (BCCI) ಈಗಾಗಲೇ ಸಿದ್ಧತೆ ಆರಂಭಿಸಿದೆ.
ಏಕದಿನ ವಿಶ್ವಕಪ್ಗೆ 20 ಆಟಗಾರರನ್ನು ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆಯಾದರೂ, ಇನ್ನಷ್ಟು ತಲೆನೋವು ತಂದ್ದೊಡ್ಡಿದೆ. ಇದಕ್ಕೆ ಕಾರಣ ಸದ್ಯ ಕ್ರಿಕೆಟ್ನಿಂದ ದೂರ ಉಳಿದಿರುವ ಪಂತ್.
ವಿಶ್ವಕಪ್ ತಂಡದಲ್ಲಿ ಪಂತ್ ಅವರನ್ನು ವಿಕೆಟ್ ಕೀಪರ್ ರೂಪದಲ್ಲಿ ಕಣಕ್ಕಿಳಿಸಲು ಬಿಸಿಸಿಐ ಪ್ಲಾನ್ ಮಾಡಿತ್ತು. ಆದರೆ ಕಾರು ಅಪಘಾತಕ್ಕೀಡಾದ ಬಳಿಕ ಪಂತ್, ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ರಿಷಭ್ ಪಂತ್, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್ (Asia Cup), ಆನಂತರ ನಡೆಯಲ್ಲಿರುವ ಏಕದಿನ ವಿಶ್ವಕಪ್‌ನಿಂದಲೂ ಹೊರಗುಳಿಯಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಪಂತ್ ಸದ್ಯ ಶಸ್ತ್ರಚಿಕಿತ್ಸೆಗಾಗಿ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಐಪಿಎಲ್‌ನಲ್ಲಿಯೂ ಆಡುತ್ತಿಲ್ಲ. ಅಲ್ಲದೆ ಈ ಕಾರಣದಿಂದಾಗಿ ಪಂತ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಲಿಲ್ಲ. ಹಾಗೆಯೇ ಜೂನ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿಯೂ ಪಂತ್ ಕಣಕ್ಕಿಳಿಯುತ್ತಿಲ್ಲ. ಇದು ಟೀಂ ಇಂಡಿಯಾಕ್ಕೆ ಭಾರಿ ಹಿನ್ನಡೆಯುಂಟು ಮಾಡಿದೆ. ಏಕೆಂದರೆ ಪಂತ್ ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿದ್ದರು.
ಪಂತ್ ಎಷ್ಟೇ ಶೀಘ್ರವಾಗಿ ಚೇತರಿಸಿಕೊಂಡರೂ ಏಕದಿನ ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ವರದಿಯ ಪ್ರಕಾರ, ಪಂತ್ ಅತ್ಯಂತ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಕನಿಷ್ಠ ಏಳೆಂಟು ತಿಂಗಳು ಬೇಕು. ಅಥವಾ ಇದಕ್ಕಿಂತಲೂ ಇನ್ನೂ ಹೆಚ್ಚಿನ ಸಮಯ ಬೇಕು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲವಾದರೂ ಆಪ್ತ ಮೂಲಗಳ ಪ್ರಕಾರ ಪಂತ್ ಮುಂದಿನ ಜನವರಿ ಬಳಿಕವೇ ತಂಡಕ್ಕೆ ಸೇರಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ತಿಳಿದುಬಂದಿದೆ.