SHOCKING NEWS | ಮತ್ತೆ ದಕ್ಷಿಣ ಕೊಡಗಿನಲ್ಲಿ ಹುಲಿ ಪ್ರತ್ಯಕ್ಷ: ಜನತೆಯಲ್ಲಿ ಆತಂಕ!

ಹೊಸದಿಗಂತ ವರದಿ, ಮಡಿಕೇರಿ:

ದಕ್ಷಿಣ ಕೊಡಗಿನಲ್ಲಿ ಬುಧವಾರ ಮತ್ತೊಂದು ಹುಲಿ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.
ಕಳೆದ ವಾರವಷ್ಟೇ ದಕ್ಷಿಣ ಕೊಡಗಿನ ಕುಟ್ಟ ಭಾಗದಲ್ಲಿ ಹುಲಿಯೊಂದು ಒಂದೇ ದಿನದೊಳಗೆ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು. ಬಳಿಕ ಆ ಹುಲಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಮೈಸೂರಿಗೆ ಸ್ಥಳಾಂತರಿಸಿತ್ತು.
ಇದೀಗ ಬುಧವಾರ ಹಾಡಹಗಲೇ ಪೊನ್ನಂಪೇಟೆ ಸಮೀಪದ‌ ಕಿರುಗೂರು ಮುಖ್ಯ ರಸ್ತೆಯ ಶಾಲೆಯ ಬಳಿ ಹುಲಿ ಪ್ರತ್ಯಕ್ಷವಾಗಿದೆ..
ಸಂಜೆ ಶಾಲೆ ಸಮೀಪದ ಕೊರಕುಟ್ಟಿರ ರಾಜಪ್ಪ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಹುಲಿಯನ್ನು ಕಂಡ ರಾಜಪ್ಪ ಅವರ ಪುತ್ರ ಸವಿನ್ ಕೂಡಲೇ ಪೊನ್ನಂಪೇಟೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇದೀಗ ಪೊನ್ನಂಪೇಟೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಹುಲಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಪೊನ್ನಂಪೇಟೆ ಆರ್. ಎಫ್. ಓ ಹಾಗೂ ಸಿಬ್ಬಂದಿಗಳು ಇದೀಗ ಅಲ್ಲಿ ಬೀಡು ಬಿಟ್ಟಿದ್ದು, ಈ ಭಾಗದ ಜನತೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಲ್ಲಿ ಕೋರಿಕೊಂಡಿದ್ದಾರೆ.
ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಕೂಡಾ ಹುಲಿಯ ಪತ್ತೆಗಾಗಿ ಅರಣ್ಯ ಇಲಾಖೆಗೆ ಸಾತ್ ನೀಡಿದ್ದಾರೆ.
ಬುಧವಾರ ಮುಂಜಾನೆಯಷ್ಟೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ನಾಡಿಗೆ ಬಂದ ಹುಲಿಗಳೆಲ್ಲವೂ ಕಾಡು ಸೇರಿಕೊಂಡಿರುವುದಾಗಿ ಹೇಳಿದ್ದರು. ಆದರೆ ಇದೀಗ ಹುಲಿ ಪ್ರತ್ಯಕ್ಷವಾಗಿರುವುದು ಅರಣ್ಯ ಇಲಾಖೆಯ ಕಾರ್ಯಕ್ಷಮತೆಯನ್ನು ಸಾರ್ವಜನಿಕರು ಸಂಶಯದಿಂದ ನೋಡುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!