ಅಬ್ಬಾ ಎಂತಾ ಕಾಲ ಬಂತು.. ಚಿಕಿತ್ಸೆ ವೇಳೆ ಮಹಿಳೆ ಅತ್ತಿದ್ದಕ್ಕೆ 3100 ರೂ. ಚಾರ್ಜ್‌ ಮಾಡಿದ ವೈದ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವ್ಯಕ್ತಿಯೊಬ್ಬ ಆರೋಗ್ಯವಂತನಾಗಿರುವವರೆಗೂ ಎಲ್ಲವೂ ಸುಸೂತ್ರ. ಆದರೆ ಆ ವ್ಯಕ್ತಿ ಖಾಯಿಲೆ ಬಿದ್ದನೋ ನೂರೆಂಟು ಸಮಸ್ಯೆಗಳು ಹಿಂಬಾಲಿಸತೊಡಗುತ್ತವೆ. ವೈದ್ಯರ ಶುಲ್ಕ, ರೋಗ ಪರೀಕ್ಷೆ ಶುಲ್ಕಗಳು, ಚಿಕಿತ್ಸೆಯ ವೆಚ್ಚ, ಮಾತ್ರೆ.. ಔಷಧಿ.. ಹೀಗೆ ಒಂದಾದ ಮೇಲೊಂದರಂತೆ ಖರ್ಚು ರೋಗಿಯನ್ನು ಮತ್ತಷ್ಟು ಹೈರಾಣಾಗಿಸಿಬಿಡುತ್ತವೆ. ಇತ್ತಿಚೆಗಂತೂ ಆರೋಗ್ಯಕ್ಕಾಗಿಯೇ ದುಬಾರಿ ಹಣ ಎತ್ತಿಡಬೇಕಾದ ಪರಿಸ್ಥಿತಿಯಿದೆ. ಸಣ್ಣಪುಟ್ಟ ಖಾಯಿಲೆಗೂ ದೊಡ್ಡ ಬಿಲ್‌ ಮಾಡುವ ವೈದ್ಯರೂ ಇದ್ದಾರೆ. ಆದರೆ ಚಿಕಿತ್ಸೆ ವೇಳೆ ಅತ್ತಿದ್ದೀರಿ ಎಂಬ ಕಾರಣ ನೀಡಿ ವೈದ್ಯರು ದೊಡ್ಡ ಮೊತ್ತದ ಬಿಲ್‌ ಬರೆದುಕೊಟ್ಟರೆ ರೋಗಿಯ ಸ್ಥಿತಿ ಹೇಗಾಗಿರಬೇಡ!?

ಇಂತಹದ್ದೊಂದು ಘಟನೆ ನಡೆದಿದ್ದು ಅಮೆರಿಕದಲ್ಲಿ. ಕ್ಯಾಮಿಲ್ಲೆ ಜಾನ್ಸನ್ ಎಂಬ ಮಹಿಳೆ ಟ್ವಿಟರ್‌ ನಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ನನ್ನ ಸಹೋದರಿ ಖಿನ್ನತೆಯಿಂದ ಬಳಲುತ್ತಿದ್ದಳು. ಹಾಗಾಗಿ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದೆವು. ಆಕೆ ಮನಸ್ಸಿಗೆ ಹತಾಶ ಸ್ಥಿತಿ ಎದುರಾದಾಗಲೆಲ್ಲಾ ಖಿನ್ನತೆಯಿಂದ ಭಾವುಕಳಾಗುತ್ತಾಳೆ. ಅಂತೆಯೇ ಚಿಕಿತ್ಸೆ ವೇಳೆಯೂ ಆಕೆ ಭಾವುಕಳಾಗಿ ಕಣ್ಣೀರಿಟ್ಟಳು. ಆದರೆ ಬಳಿಕ ವೈದ್ಯರು ನೀಡಿದ ಬಿಲ್‌ ನೋಡಿ ನಮಗೆ ಆಘಾತವಾಯಿತು. ಆಕೆ ಅತ್ತಿದ್ದನ್ನು ಬ್ರೀಫ್‌ ಎಮೋಷನಲ್‌ \ ಬಿಹೇವಿಯರಲ್‌ ಅಸೆಸ್‌ ಮೆಂಟ್‌ ಎಂದು ನಮೂದಿಸಿದ್ದ ವೈದ್ಯ 40 ಡಾಲರ್‌ (3100 ರೂ) ಚಾರ್ಜ್‌ ಮಾಡಿದ್ದಾರೆ ಎಂದು ಆಸ್ಪತ್ರೆ ಬಿಲ್ಲಿನ ಫೋಟೋವನ್ನು ಶೇರ್‌ ಮಾಡಿದ್ದಾರೆ. ಕ್ಯಾಮಿಲ್ಲೆ ಜಾನ್ಸನ್ ಟ್ವೀಟ್‌ ಇದೀಗ ಬಾರೀ ವೈರಲ್‌ ಆಗುತ್ತಿದ್ದು 4.8 ಸಾವಿರ ಜನರು ಪ್ರತಿಕ್ರಿಯಿಸಿದ್ದಾರೆ. ಬಹಳಷ್ಟು ಟ್ವಿಟರ್‌ ಬಳಕೆದಾರರು ತಾವು ಚಿಕಿತ್ಸೆ ಪಡೆಯುವಾಗಿನ ಅನುಭವಗಳು, ಸಣ್ಣಪುಟ್ಟ ಟೆಸ್ಟ್‌ ಗಳಿಗೆ ದೊಡ್ಡ ಮೊತ್ತ ತೆತ್ತಿದ್ದು, ವೈದ್ಯರ ಹಣಬಾಕತನ, ಆಸ್ಪತ್ರೆಯ ದುಬಾರಿ ದರಗಳನ್ನು ಭರಿಸಲಾಗದೇ ಸಾಲದಲ್ಲಿ ಮುಳುಗಿದ್ದು ಹೀಗೆ ತಮ್ಮ ವೈಯಕ್ತಿಕ ಅನುಭವಗಳನ್ನು ಬರೆದುಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!