ಕಾಫಿ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಗಳ ಕೊರತೆ

ಹೊಸದಿಗಂತ ವರದಿ, ಮಡಿಕೇರಿ:

ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದಲ್ಲಿ ಅಗ್ರಾನಮಿ, ಪೆಥಾಲಜಿ, ಫಿಸಿಯಾಲಜಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳ ಹುದ್ದೆಗಳು ಖಾಲಿ ಇರುವುದಾಗಿ ಕೇಂದ್ರದ ಉಪ ನಿರ್ದೇಶಕ ಚಂದ್ರಪ್ಪ ಅವರು ತಿಳಿಸಿದರು.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಪ್ರಮುಖರೊಂದಿಗಿನ ‘ಸಂವಾದ’ದಲ್ಲಿ ಪಾಲ್ಗೊಂಡು ಮಾತನಾಡಿದ‌ ಅವರು, ಪ್ರಸಕ್ತ ಕೇಂದ್ರದಲ್ಲಿ ಐವರು ವಿಜ್ಞಾನಿಗಳು ಸೇರಿದಂತೆ 20 ಮಂದಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ 120.86 ಹೆಕ್ಟೇರ್ ಜಾಗವನ್ನು ಹೊಂದಿದ್ದು, ಅದರಲ್ಲಿ 108.36 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗಿದೆ. ತೋಟದಲ್ಲಿ ಒಟ್ಟು 69 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿಯನ್ನಿತ್ತರು.
ರೋಗಬಾಧೆಗೆ ಮುಕ್ತಿ: ಕೇಂದ್ರದ ಮಣ್ಣು ವಿಜ್ಞಾನಿ ರಾಜೀಬ್ ಪಾಟಿ ಮಾತನಾಡಿ, ಮಣ್ಣು ಪೋಷಕಾಂಶಗಳಿಂದ ಕೂಡಿ ಆರೋಗ್ಯಯುತವಾಗಿದ್ದಲ್ಲಿ, ಅಲ್ಲಿರುವ ಕೃಷಿ ರೋಗ ಬಾಧೆಯಿಂದ ಬಹುತೇಕ ಮುಕ್ತವಾಗಿರುತ್ತದೆ. ಕೊಡಗಿನಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲೂ ಮಳೆ ಇರುವುದರಿಂದ ಹೆಚ್ಚಾಗಿ ಮಣ್ಣಿನ ಆಮ್ಲೀಯತೆಯ ಮಟ್ಟ(ಪಿಹೆಚ್ ವ್ಯಾಲ್ಯು) ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಣ್ಣಿನ ಪರೀಕ್ಷೆಯ ಮೂಲಕ, ಒಂದು ತೋಟಕ್ಕೆ ಎಷ್ಟು ರಸ ಗೊಬ್ಬರವನ್ನು ಹಾಕಬೇಕೆನ್ನುವುದನ್ನು ಖಚಿತವಾಗಿ ನಿರ್ಧರಿಸಿ, ಕೇಂದ್ರ ನೀಡುವ ಸಲಹೆಯಂತೆ ರಸಗೊಬ್ಬರವನ್ನು ನೀಡುವುದು ಅವಶ್ಯವೆಂದು ಸ್ಪಷ್ಟಪಡಿಸಿದರು.
ರೋಗ ನಿರೋಧಕ ಗಿಡದ ಸಂಶೋಧನೆ- ಸಸ್ಯ ತಳಿ ಶಾಸ್ತ್ರದ ವಿಜ್ಞಾನಿ ಡಾ. ಮಂಜುನಾಥ್, ಕಾಫಿ ಗಿಡಗಳನ್ನು ಬಾಧಿಸುವ ಬಿಳಿಕಾಂಡ ಕೊರಕ ಕಿಟಗಳನ್ನು ನಿಯಂತ್ರಿಸುವ ಹೊಸ ಕಾಫಿ ತಳಿಯ ಸಂಶೋಧನೆಯನ್ನು ಕೇಂದ್ರ ನಡೆಸುತ್ತಿದೆಯಲ್ಲದೆ, ಜಿಲ್ಲೆಯ ವಿವಿಧ 30 ಕಾಫಿ ತೋಟಗಳಲ್ಲಿನ ಅಧಿಕ ಇಳುವರಿ ನೀಡುವ 205 ಗಿಡಗಳ ಪರಿಶೀಲನಾ ಕಾರ್ಯವನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಕೇಂದ್ರದಿಂದ ಆಸಕ್ತ ಬೆಳೆಗಾರರಿಗೆ ಪ್ರಸ್ತುತ ಅರೇಬಿಕಾ ಚಂದ್ರಗಿರಿ ತಳಿಯನ್ನು ಮತ್ತು ರೋಬಸ್ಟಾದಲ್ಲಿ ಕಾಂಜೆನ್ಸಿ ರೋಬಸ್ಟಾ ತಳಿಯ ಬೀಜಗಳನ್ನು ಪ್ರತಿ ಕೆ.ಜಿ.ಗೆ 400 ರೂ.ಗಳಂತೆ ಒದಗಿಸಲಾಗುತ್ತಿದೆಯೆಂದು ಹೇಳಿದರು.
ಕಂಬ ಚಿಗುರಿನಿಂದ ಗಿಡ: ಕಾಫಿ ತೋಟಗಳಲ್ಲಿ ಅಧಿಕ ಫಸಲು ನೀಡುವ ಗಿಡಗಳ ಕಂಬ ಚಿಗುರುಗಳಿಂದ ಗಿಡಗಳನ್ನು ಉತ್ಪಾದಿಸಿ ಬೆಳೆಗಾರರಿಗೆ ಮೇ ಮತ್ತು ಜೂನ್ ತಿಂಗಳಿನಲ್ಲಿ ಬೇಡಿಕೆಗೆ ಅನುಗುಣವಾಗಿ ಒದಗಿಸಲಾಗುತ್ತದೆ. ಕಂಬ ಚಿಗುರಿನಿಂದ ಉತ್ಪಾದಿಸುವ ಗಿಡ, ಮೂಲ ಗಿಡದಂತೆಯೇ ಅಧಿಕ ಇಳುವರಿ ನೀಡುವ ಗಿಡವಾಗಿರುತ್ತದೆಂದು ಮಾಹಿತಿ ನೀಡಿದ ಅವರು, ಕಂಬ ಚಿಗುರಿನಿಂದ ಗಿಡಗಳನ್ನು ಮಾಡುವ ವಿಧಾನವನ್ನು ಆಸಕ್ತ ಬೆಳೆಗಾರರಿಗೆ ತಿಳಿಸಿಕೊಡಲು ಕೇಂದ್ರ ಸದಾ ಸಿದ್ಧವಿದೆಯೆಂದು ಸಷ್ಟಪಡಿಸಿದರು.
ಮಣ್ಣು ವಿಜ್ಞಾನಿ ಪ್ರಫುಲ್ಲ ಮಾತನಾಡಿ, ಕೇಂದ್ರವು ಬೆಳೆಗಾರರು ನೀಡುವ ಮಣ್ಣನ್ನು(ಸ್ಯಾಂಪಲ್)ನಿಗದಿತ ದರದೊಂದಿಗೆ ಪರಿಶೀಲಿಸಿ, ಆಯಾ ತೋಟಕ್ಕೆ ಒದಗಿಸಬೇಕಾದ ಪೋಷಕಾಂಶಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತಿದೆ. ಕಳೆದ ಸಾಲಿನಲ್ಲಿ ಕೇಂದ್ರ 2100 ಮಣ್ಣು ಪರೀಕ್ಷೆಗಳನ್ನು ನಡೆಸಿದ್ದು, ಇದರ ಸದುಪಯೋಗವನ್ನು 800 ಬೆಳೆಗಾರರು ಪಡೆದುಕೊಂಡಿದ್ದಾರೆಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!