ಹೊಸ ದಿಗಂತ ವರದಿ, ಮೈಸೂರು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದ್ದ ಮೈಸೂರಿನ ಎನ್.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ರ ಬೆಂಬಲಿಗರಾದ 6 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನ ಅಮಾನತು ಮಾಡಲಾಗಿದೆ.
ಶಾಸಕ ತನ್ವೀರ್ ಸೇಠ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಹಿದ್,ಎ.ಎನ್.ಲೋಕೇಶ್,ಅಬೀಬ್, ಅಣ್ಣು ಹಾಗೂ
ಅಣ್ಣು ಪುತ್ರ ಸಸ್ಪೆಂಡ್ ಆದವರು.
ಮೈಸೂರು ಮಹಾನಗರಪಾಲಿಕೆಯ ಮೇಯರ್ ಚುನಾವಣೆಗೆ ಸಂಬoಧಿಸಿದoತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಮೇಯರ್ ಸ್ಥಾನವನ್ನ ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಕ್ಕೆ ಸ್ಥಳೀಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಅಸಮಾಧಾನಗೊಂಡಿದ್ದರು. ಅಲ್ಲದೇ ಕಾಂಗ್ರೆಸ್ ಹೈಕಮಾಂಡ್ ಕೂಡ ಶಾಸಕ ತನ್ವೀರ್ ಸೇಠ್ ಗೆ ನೋಟಿಸ್ ನೀಡಲು ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಫೆ.26ರಂದು ಎನ್.ಆರ್.ಕ್ಷೇತ್ರದಲ್ಲಿರುವ ತನ್ವೀರ್ ಸೇಠ್ ಅವರ ಮನೆ ಮುಂದೆಯೇ ಅವರ ಬೆಂಬಲಿಗರು ಸಿದ್ದರಾಮಯ್ಯ ವಿರುದ್ದ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎನ್.ಆರ್.ಕ್ಷೇತ್ರದ ತನ್ವೀರ್ ಸೇಠ್ ಬೆಂಬಲಿಗರರಾದ 6 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನ ಮುಂದಿನ ಆದೇಶದವರೆಗೆ ಅಮಾನತು ಮಾಡಿ, ಮೈಸೂರು ನಗರ ಅಧ್ಯಕ್ಷ ಆರ್.ಮೂರ್ತಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಕಲಹ ಮತ್ತಷ್ಟು ರಂಗೇರಿದೆ.