ಲಾರೆನ್ಸ್​ ಬಿಷ್ಣೋಯ್ ಹಿಟ್​ ಲಿಸ್ಟ್​ನಲ್ಲಿ ಶ್ರದ್ಧಾ ವಾಕರ್ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

2022 ರಲ್ಲಿ ತನ್ನ ಲಿವ್ ಇನ್ ಪಾಲುದಾರ ಶ್ರದ್ಧಾ ವಾಕರ್ ಅವರನ್ನು ಕೊಲೆ ಮಾಡಿ ಫ್ರಿಡ್ಜ್​ನಲ್ಲಿರಿಸಿ ಬಳಿಕ ದೆಹಲಿಯ ಬೇರೆ ಬೇರೆ ಭಾಗಗಳಲ್ಲಿ ದೇಹದ ಭಾಗಗಳನ್ನು ವಿಲೇವಾರಿ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲಾ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿದ್ದಾನೆ ಎಂದು ಮುಂಬೈ ಪೊಲೀಸ್ ಮೂಲಗಳು ಹೇಳಿವೆ.

ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಹತ್ಯೆಯ ತನಿಖೆಯ ಸಮಯದಲ್ಲಿ ಅಫ್ತಾಬ್ ಪೂನಾವಾಲಾ ಬಿಷ್ಣೋಯ್​ ಶೂಟರ್​ಗಳ ಹಿಟ್​ಲಿಸ್ಟ್​ನಲ್ಲಿರುವುದು ತಿಳಿದುಬಂದಿದೆ. ಈ ಮಾಹಿತಿಯ ಹಿನ್ನೆಲೆಯಲ್ಲಿ, ಪ್ರಸ್ತುತ ಪೂನಾವಾಲಾ ಅವರನ್ನು ಬಂಧಿಸಿರುವ ತಿಹಾರ್ ಜೈಲಿನ ಆಡಳಿತವು ಆರೋಪಿಗಳ ಸುತ್ತ ಭದ್ರತೆಯನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.

ಆದರೆ, ಮುಂಬೈ ಪೊಲೀಸರಿಂದ ತಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ 27 ವರ್ಷದ ಶ್ರದ್ಧಾ ವಾಕರ್ ಅವರನ್ನು ಕತ್ತು ಹಿಸುಕಿ, ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅಫ್ತಾಬ್ ಪೂನಾವಾಲಾ ಕೊಲೆ ಮಾಡಿದ್ದ. ಶ್ರದ್ಧಾ ಮದುವೆಯಾಗುವಂತೆ ಒತ್ತಡ ಹೇರಿದ ನಂತರ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಭಯಾನಕ ಘಟನೆಯು ದೇಶಾದ್ಯಂತ ಆಘಾತ ಮೂಡಿಸಿತ್ತು.

ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಬಿಷ್ಣೋಯ್ ಗ್ಯಾಂಗ್ ತನ್ನ ಅಪರಾಧ ಚಟುವಟಿಕೆಗಳ ಭಾಗವಾಗಿ ಹಲವಾರು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದೆ. ಇದು ಸೇಡು ಮತ್ತು ಪೈಪೋಟಿಯಿಂದ ಪ್ರೇರೇಪಿಸಲ್ಪಟ್ಟಿದೆ. ಅವರ ಪ್ರಾಥಮಿಕ ಗುರಿಗಳಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸೇರಿದ್ದಾರೆ.

ಇನ್ನು ಅಫ್ತಾಬ್ ಜೊತೆಗೆ ಹಿಟ್ ಲಿಸ್ಟ್‌ನಲ್ಲಿರುವ ಇತರರಲ್ಲಿ ಬಿಷ್ಣೋಯ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಮ್ಯಾನೇಜರ್ ಶಗನ್‌ಪ್ರೀತ್ ಸಿಂಗ್ ಸೇರಿದ್ದಾರೆ. ಪ್ರಸ್ತುತ ಗುರುಗ್ರಾಮ್‌ನಲ್ಲಿ ಜೈಲಿನಲ್ಲಿರುವ ದರೋಡೆಕೋರ ಕೌಶಲ್ ಚೌಧರಿ ಮತ್ತು ಪ್ರತಿಸ್ಪರ್ಧಿ ದರೋಡೆಕೋರ ಅಮಿತ್ ದಾಗರ್ ಕೂಡ ಬಿಷ್ಣೋಯಿ ತನ್ನ ಶತ್ರುಗಳ ಲಿಸ್ಟ್‌ನಲ್ಲಿ ಇಟ್ಟುಕೊಂಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!