ಮುಸ್ಲಿಂ ಹುಡುಗನ ಮೋಹಕ್ಕೆ ಬಿದ್ದ ಶ್ರದ್ಧಾ ಎಂಬಾಕೆ ಸಿಕ್ಕಿರೋದು 35 ತುಂಡುಗಳಾಗಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಆಕೆ ಶ್ರದ್ಧಾ. ಆತ ಅಫ್ತಾಬ್ ಅಮೀನ್ ಪೂಣಾವಾಲಾ. ಮನೆಯವರ ವಿರೋಧಕ್ಕೆ ಮಣಿಯದೇ ಅಫ್ತಾಬ್ ಜತೆ ದೆಹಲಿಯ ಮೆಹರೌಲಿಯ ಫ್ಲಾಟ್ ಒಂದರಲ್ಲಿ ಲೀವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ ಶ್ರದ್ಧಾಳನ್ನು, ಆಕೆಯ ತಥಾಕಥಿತ ಪ್ರೇಮಿ ಅಫ್ತಾಬ್, ಕುತ್ತಿಗೆ ಹಿಸುಕಿ ಸಾಯಿಸಿ, ಆಕೆಯ ದೇಹದ 35 ತುಂಡುಗಳನ್ನು ಮಾಡಿ, ಫ್ರಿಡ್ಜ್ ನಲ್ಲಿಟ್ಟು, ಅವನ್ನೆಲ್ಲ ದೆಹಲಿಯ ಬೇರೆ ಬೇರೆ ಕಡೆ ಒಗೆಯುತ್ತ ಬಂದಿದ್ದ. ಇದೀಗ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ.
ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿ ಶ್ರದ್ಧಾ, ಅಫ್ತಾಬ್ ಜತೆ ಪ್ರೇಮ ವ್ಯವಹಾರ ಶುರುಮಾಡಿದಾಗ ಮನೆಯವರು ಅದನ್ನು ವಿರೋಧಿಸುತ್ತಾರೆ. ಈಕೆ ಮನೆಯವರನ್ನು ತೊರೆದು ಅಫ್ತಾಬ್ ಜತೆ ಫ್ಲಾಟಿನಲ್ಲಿ ವಾಸ ಮಾಡಲು ಪ್ರಾರಂಭಿಸುತ್ತಾಳೆ. ಆ ಮುನಿಸಿನ ನಡುವೆಯೂ ಮನೆಯವರೊಂದಿಗೆ ಫೋನಿನಲ್ಲಿ ಆಗೀಗ ಮಾತುಕತೆ ಇರುತ್ತದೆ. ಯಾವಾಗ ಈಕೆ ಫೋನಿಗೆ ಸಿಗದೇ ತಿಂಗಳುಗಳೇ ಆದವೋ ಆಗ ಮನೆಯವರಿಗೆ ಅನುಮಾನ ಬಂದು ವಿಚಾರಣೆ ಪ್ರಾರಂಭಿಸುತ್ತಾರೆ. ಆಕೆಯ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಯಾವುದೇ ಚಟುವಟಿಕೆ ಇರದಿದ್ದನ್ನು ಗಮನಿಸಿ ಶ್ರದ್ಧಾ ಕುಟುಂಬ ಆಕೆಯ ತಂದೆಯನ್ನು ದೆಹಲಿಗೆ ನೋಡಿಕೊಂಡುಬರಲು ಕಳಿಸುತ್ತದೆ. ಅಲ್ಲಿ ಅವರನ್ನು ಸ್ವಾಗತಿಸಿದ್ದು ಬಾಗಿಲು ಲಾಕ್ ಆದ ಫ್ಲಾಟ್.


ಆಗ ಪೊಲೀಸರ ಬಳಿ ಶ್ರದ್ಧಾ ಕುಟುಂಬ ತೆರಳುತ್ತದೆ. ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದ ಅಂಶ ಏನೆಂದರೆ, ಮೇ 2022ರಲ್ಲೇ ಅಫ್ತಾಬ್ ಶ್ರದ್ಧಾಳನ್ನು ಕೊಂದಿರುವ ಸಂಗತಿ. ಇವರಿಬ್ಬರ ಮಧ್ಯೆ ನಿತ್ಯ ಜಗಳಗಳಾಗುತ್ತಿದ್ದವು, ಅದೊಂದು ದಿನ ಜಗಳ ತಾರಕಕ್ಕೆ ಏರಿತು ಎಂದು ಅಕ್ಕಪಕ್ಕದವರು ಸಾಕ್ಷ್ಯ ನುಡಿದಿದ್ದಾರೆ.
ಪೊಲೀಸರ ಪ್ರಕಾರ ಹಾಗೆ ಜಗಳ ತಾರಕಕ್ಕೇರಿದ ದಿನವೇ ಶ್ರದ್ಧಾಳನ್ನು ಕೊಂದಿರುವ ಅಫ್ತಾಬ್, ಆಕೆಯ ದೇಹವನ್ನು ತುಂಡು ತುಂಡು ಮಾಡಿ ಫ್ರಿಡ್ಜಿನಲ್ಲಿಟ್ಟು, ಮುಂದಿನ ದಿನಗಳಲ್ಲಿ ಪಾಲಿಥಿನ್ ಬ್ಯಾಗಿನಲ್ಲಿ ಆ ತುಂಡುಗಳನ್ನು ತೆಗೆದುಕೊಂಡುಹೋಗಿ ಬೇರೆ ಬೇರೆ ಭಾಗಗಳಿಗೆ ಎಸೆದಿದ್ದಾನೆ. ಪ್ರಕರಣದ ಪೂರ್ಣ ತನಿಖೆಯಿನ್ನೂ ಪ್ರಗತಿಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!