‘ಶ್ರೀಕೃಷ್ಣ, ಹನುಮಂತ ಶ್ರೇಷ್ಠ ರಾಜತಾಂತ್ರಿಕರುʼ – ಪುರಾಣಗಳನ್ನು ಉಲ್ಲೇಖಿಸಿ ಭಾರತದ ರಾಜತಾಂತ್ರಿಕತೆಯನ್ನು ಜೈಶಂಕರ್‌ ವಿವರಿಸಿದ್ದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ರಾಜಕೀಯದಲ್ಲಿ ಕುಗ್ಗಿಹೋಗಿದ್ದ ಭಾರತದ ರಾಜತಾಂತ್ರಿಕತೆಗೆ ಹೊಸರೂಪ ಕೊಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಮಿಂಚುವಂತೆ ಮಾಡಿ, ಭಾರತದ ಧ್ವನಿಯನ್ನು ಜಗತ್ತೇ ಕೇಳಿಸಿಕೊಳ್ಳುವಂತೆ, ಅನುಸರಿಸುವಂತೆ ಮಾಡಿದ್ದರಲ್ಲಿ ಇಂದಿನ ವಿದೇಶಾಂಗ ಸಚಿವರಾಗಿರೋ ಎಸ್.‌ಜೈಶಂಕರ್‌ ಅವರ ಪಾತ್ರ ಹಿರಿದು. ಪಾಶ್ಚಾತ್ಯ ರಾಷ್ಟ್ರಗಳಿಗೆ ಅವರದ್ದೇ ಶೈಲಿಯಲ್ಲಿ ಉತ್ತರಿಸುವ ಜೈಶಂಕರ್‌ ಅವರು ತೀಕ್ಷ್ಣ ಮಾತುಗಳಿಂದಲೇ ಪಾಕಿಸ್ತಾನದಂತ ಉಗ್ರರನ್ನು ಬೆಂಬಲಿಸುವ ದೇಶಗಳನ್ನು ಜಗತ್ತಿನೆದುರು ಬೆತ್ತಲಾಗಿಸಿಬಿಡುತ್ತಾರೆ. ಅವರು ಭಾರತದ ರಾಜತಾಂತ್ರಿಕತೆಯ ಕುರಿತು ಇತ್ತೀಚೆಗೆ ಆಡಿರುವ ಮಾತುಗಳೀಗ ಭಾರಿ ಚರ್ಚೆಯಲ್ಲಿದೆ. ಭಾರತದ ರಾಜತಾಂತ್ರಿಕತೆಯು ಭಾರತದ ಪುರಾಣಗಳ ನೆಲೆಯಲ್ಲಿಯೇ ರೂಪಿತವಾಗಬೇಕು ಎಂಬುದು ಜೈಶಂಕರ್‌ ಹೇಳಿರೋ ಅಂಶ.

ಇತ್ತೀಚೆಗೆ ಅವರು ಭಾರತದ ರಾಜತಾಂತ್ರಿಕತೆಯ ಕುರಿತಾಗಿ ಬರೆದಿರುವ ʼಇಂಡಿಯಾ ವೇʼ ಪುಸ್ತಕದ ಮರಾಠಿ ಅವತರಣಿಕೆಯನ್ನು ಬಿಡುಗಡೆಗೊಳಿಸುವ ವೇಳೆ ಜೈಶಂಕರ್‌ ಭಾರತದ ಪುರಾಣಗಳಾದ ಮಹಾಭಾರತ, ರಾಮಾಯಣಗಳನ್ನು ಉಲ್ಲೇಖಿಸಿ ಇವುಗಳು ಭಾರತದ ರಾಜತಾಂತ್ರಿಕತೆಗೆ ದಾರಿತೋರಬಲ್ಲವು ಎಂಬರ್ಥದ ಮಾತುಗಳನ್ನಾಡಿದ್ದಾರೆ. ಪುರಾಣ ಪ್ರಸಿದ್ಧ ಪಾತ್ರಗಳಾದ ಶ್ರೀಕೃಷ್ಣ ಪರಮಾತ್ಮನನ್ನು ಹಾಗು ಭಗವಾನ್‌ ಹನುಮಂತನನ್ನು ಉಲ್ಲೇಖಿಸಿದ ಜೈಶಂಕರ್‌ ʼಶ್ರೀಕೃಷ್ಣ ಮತ್ತು ಹನುಮಂತ ಶ್ರೇಷ್ಠ ರಾಜತಾಂತ್ರಿಕರು” ಎಂದಿದ್ದಾರೆ. “ತಂತ್ರಗಾರಿಕೆ ಮತ್ತು ಬುದ್ಧಿವಂತಿಕೆಯ ವಿಷಯದಲ್ಲಿ ಶ್ರೀಕೃಷ್ಣ ಮತ್ತು ಹನುಮಂತರಿಬ್ಬರೂ ಅತ್ಯಂತ ಉತ್ತಮ ರಾಜತಾಂತ್ರಿಕರು, ಪುರಾಣಗಳನ್ನು ಅವಲೋಕಿಸಿದರೆ ನಿಮಗಿದರ ಅರಿವಾಗುತ್ತದೆ. ಅವರಿಬ್ಬರೂ ಅವರಿಗೆ ನಿಯೋಜಿಸಲ್ಪಟ್ಟ ಕಾರ್ಯಗಳನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸಿದ್ದಾರೆ. ಅವರು ಬಹುಪಯೋಗಿ (Multipurpose) ರಾಜತಾಂತ್ರಿಕರು” ಎಂಬುದು ಜೈಶಂಕರ್‌ ಆಡಿರೋ ಮಾತು.

ಈ ಕುರಿತು ಮುಂದುವರೆದು ಅವರು ಹೇಳಿರುವುದೇನೆಂದರೆ “ಇಂದು ಜಗತ್ತಿನಲ್ಲಿ ಚರ್ಚೆಯಲ್ಲಿರುವ ಹತ್ತು ಪ್ರಮುಖ ರಾಜತಾಂತ್ರಿಕ ಕಾರ್ಯತಂತ್ರಗಳಿಗೆ ಸಮಾನವಾದ ಉದಾಹರಣೆಗಳನ್ನು ನಾನು ಮಹಾಭಾರತದಿಂದ ಪ್ರಸ್ತುತಪಡಿಸಬಲ್ಲೆ. ಇಂದು ಜಗತ್ತು ಬಹುಧ್ರುವ (Multi-Polar) ರಾಜತಾಂತ್ರಿಕತೆಯ ಕುರಿತು ಮಾತನಾಡುತ್ತದೆ. ಆ ಸಮಯದಲ್ಲಿ ಕುರುಕ್ಷೇತ್ರದಲ್ಲಿದ್ದದ್ದೂ ಕೂಡ ಬಹುಧ್ರುವೀ ಭಾರತವಾಗಿತ್ತು. ಹಲವು ರಾಜರು ಅಲ್ಲಿದ್ದರು. ಅವರ ಮಧ್ಯದಲ್ಲಿ ಭಿನ್ನಪಕ್ಷಗಳ ಮೈತ್ರಿಗಳು ಏರ್ಪಟ್ಟಿದ್ದವು. ಬಲರಾಮ, ರುಕ್ಮ ರಂತಹ ಆಲಿಪ್ತ ನೀತಿ ಅನುಸರಿಸುವವರೂ ಇದ್ದರಲ್ಲ”

ಇನ್ನು ಪಾಕಿಸ್ತಾನದ ಕುರಿತಾಗಿನ ರಾಜತಾಂತ್ರಿಕತೆಯ ಕುರಿತು ಜೈಶಂಕರ್‌ ನೀಡಿರುವ ಮಹಾಭಾರತದ ಉದಾಹರಣೆ ಅತ್ಯಂತ ಆಸಕ್ತಿದಾಯಕವಾಗಿದೆ. ಶಿಶುಪಾಲನ ಉಲ್ಲೇಖ ನೀಡಿದ ಜೈಶಂಜಕರ್‌ ಹೀಗೆ ವಿವರಣೆಯನ್ನು ನೀಡುತ್ತಾರೆ “ಶ್ರೀಕೃಷ್ಣ ಶಿಶುಪಾಲನನ್ನು ವಧಿಸುವ ಮುನ್ನ 100 ಬಾರಿ ಆತನಿಗೆ ಕ್ಷಮಾಪಣೆ ನೀಡಿದ್ದ. ಆಮೇಲೇನಾಯಿತು ಎಂಬುದು ನಿಮಗೆಲ್ಲ ಗೊತ್ತಿದೆ. ಪಾಕಿಸ್ತಾನದ ವಿಷಯದಲ್ಲಿ ನಾವು ಕಾರ್ಯತಂತ್ರದ ತಾಳ್ಮೆಯನ್ನು ಪ್ರದರ್ಶಿಸಬೇಕು ಎಂದು ನಾನು ಹೇಳಬಯಸುತ್ತೇನೆ. ಅಲ್ಲದೇ ಪಾಂಡವರು ತಮ್ಮ ಸಂಬಂಧಿಕರನ್ನು ಆಯ್ಕೆ ಮಾಡಲು ಸಾಧ್ಯವಾಗದಂತೆಯೇ ಭಾರತವು ಕೂಡ ತನ್ನ ನೆರೆಹೊರೆಯವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ”

ರಾಷ್ಟ್ರಗಳ ನಡುವೆ ಅನುಸರಿಸಬೇಕಾದ ನಿಯಮಗಳು ಮತ್ತು ಗಡಿಗಳಿವೆ, ಮಹಾಭಾರತವು ಕೂಡ ಇದೇ ರೀತಿಯ ನಿಯಮಗಳನ್ನು ಹೊಂದಿದೆ ಎಂದ ಜೈಶಂಕರ್‌ “ಪಾಂಡವರು ಮತ್ತು ಕೌರವರು 7:11 ಅನುಪಾತವನ್ನು ಹೊಂದಿದ್ದರು ಆದರೆ ಬುದ್ಧಿವಂತಿಕೆ ಮತ್ತು ತಂತ್ರವು ವಿಭಿನ್ನವಾಗಿತ್ತು. ಅಂತಹ ಸಂದರ್ಭಗಳಲ್ಲಿ ಪ್ರತಿಷ್ಠೆಯು (reputation) ಅತ್ಯಂತ ಮೌಲ್ಯಯುತವಾಗಿರುತ್ತದೆ. ಒಳ್ಳೆಯದಕ್ಕಾಗಿ, ಕೆಲವೊಮ್ಮೆ ಯುದ್ಧತಂತ್ರದ ಹೊಂದಾಣಿಕೆಗಳನ್ನು ಮಾಡಬೇಕಾಗುತ್ತದೆ, ಮತ್ತು ತಂತ್ರದ ವಂಚನೆಗಳನ್ನು ಮಾಡಬೇಕಾಗುತ್ತದೆ. ನಾವು ಟ್ರೋಜನ್ ಹಾರ್ಸ್, ಅಕಿಲ್ಸ್ ಹೀಲ್ ಹೀಗೆ ತುಂಬಾ ಭಾರವಾದ ಪದಗಳನ್ನು ಬಳಸುತ್ತೇವೆ. ಪದಗಳ ಬಳಕೆಯಲ್ಲಿ ನನಗೆ ಸಮಸ್ಯೆ ಇಲ್ಲ ಆದರೆ ನಾವು ನಿಜವಾಗಿಯೂ ಭಾರತೀಯ ಕಾರ್ಯತಂತ್ರದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ, ನಾವು ನಮ್ಮದೇ ಪುರಾಣಗಳಿಗೆ ಹಿಂತಿರುಗಬೇಕು” ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!