Friday, July 1, 2022

Latest Posts

ಬಿಜೆಪಿ ಅಧಿಕಾರ ವಿಕೇಂದ್ರೀಕರಣದ ವಿರುದ್ಧ: ಸಿದ್ದರಾಮಯ್ಯ ಆರೋಪ

ಹೊಸದಿಗಂತ ವರದಿ,ಚಿತ್ರದುರ್ಗ:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅಧಿಕಾರ ಇರಬೇಕೆಂಬ ಕಾರಣಕ್ಕೆ ಕಾಂಗ್ರೆಸ್‌ನವರು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೊಳಿಸಿದರು. ಆದರೆ ಬಿಜೆಪಿಯವರು ಇದಕ್ಕೆ ವಿರುದ್ಧವಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ನಗರದ ಜೆ.ಎಂ.ಐ.ಟಿ. ಸರ್ಕಲ್ ಬಳಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಚಿತ್ರದುರ್ಗ-ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಸಭೆಗಳ ಮೂಲಕ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಸಹಕಾರಿಯಾಗಿದೆ. ಆದರೆ ಗ್ರಾಮ ಸಭೆಗಳನ್ನೇ ಮೊಟಕುಗೊಳಿಸುವ ಕೆಲಸ ಬಿಜೆಪಿಯಿಂದ ಆಗುತ್ತಿದೆ ಎಂದು ಆಕ್ಷೇಪಿಸಿದರು.
ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸಂವಿಧಾನದ ೭೩, ೭೪ನೇ ತಿದ್ದುಪಡಿ ತಂದು ಮಹಿಳೆಯರಿಗೆ ಶೇ.೩೩ ರಷ್ಟು ಹಾಗೂ ಅಲ್ಪಸಂಖ್ಯಾತರು, ಹಿಂದುಳಿದವರಿಗೆ ಮೀಸಲಾತಿ ನೀಡಿದರು. ಪರಿಶಿಷ್ಟ ಜಾತಿ, ಪಂಗಡದವರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನೀಡಿದ ಕೀರ್ತಿ ರಾಜೀವ್ ಗಾಂಧಿ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ನರೇಗಾ ಯೋಜನೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಅವಧಿಯಲ್ಲಿ ರಾಜ್ಯದಲ್ಲಿ ನನ್ನ ಅಧಿಕಾರ ಅವಧಿಯಲ್ಲಿ ೧೫ ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಈಗಿನ ಬಿಜೆಪಿ ಸರಕಾರದಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಪ್ರತಿ ಕುಟುಂಬದ ಪ್ರತಿ ಸದಸ್ಯನಿಗೆ ೭ ಕೆ.ಜಿ. ಅಕ್ಕಿ ಕೊಡುತ್ತಿದ್ದೆ. ಈಗ ಅದರ ಪ್ರಮಾಣ ಕಡಿತ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನಮೋಹನ್ ಸಿಂಗ್ ಅವಧಿಯಲ್ಲಿ ಎಲ್‌ಪಿಜಿ ಬೆಲೆ ೪೬೫ ರೂ. ಇತ್ತು. ಈಗ ೯೬೦ಕ್ಕೆ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಎಲ್ಲಿದೆ ಅಚ್ಚೇ ದಿನ್ ಮೋದಿಜೀ ಎಂದು ಪ್ರಶ್ನಿಸಿ, ರಾಜ್ಯದ ನಾನಾ ಉಪಚುನಾವಣೆಯಲ್ಲಿ ಸೋತ ನಂತರ ಒಂದಿಷ್ಟು ಪೆಟ್ರೋಲ್ ದರ ಕಡಿತಗೊಳಿಸಿದ್ದಾರೆ ಎಂದರು.
ಈ ಸರ್ಕಾರದಲ್ಲಿ ಯೋಜನೆ ಮಂಜೂರಾತಿಗೆ ಶೇಕಡಾ ೪೦ ರಷ್ಟು ಲಂಚ ಕೊಡಬೇಕೆಂದು ಗುತ್ತಿಗೆದಾರರ ಸಂಘದವರು ಪ್ರಧಾನಮಂತ್ರಿಗೆ ಕಳೆದ ಜುಲೈನಲ್ಲಿ ಪತ್ರ ಬರೆದಿದ್ದಾರೆ. ಇಷ್ಟೊಂದು ಭ್ರಷ್ಟ ಸರ್ಕಾರ ಕರ್ನಾಟಕದ ಇತಿಹಾಸದಲ್ಲೇ ಕಂಡಿಲ್ಲ. ವಿಧಾನಸೌಧದಲ್ಲಿ ಲಂಚದ ವಾಸನೆ ನಾರುತ್ತಿದೆ. ಈ ಸರ್ಕಾರ ಇದ್ದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಲ್ಲ. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು. ಹಾಗಾಗಿ ಈ ಚುಣಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಬಿ.ಸೋಮಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಘಕದ ಜಿಲ್ಲಾಧ್ಯಕ್ಷ ಗೀತಾ ನಂದಿನಿಗೌಡ, ಮಾಜಿ ಸಚಿವರಾದ ಎಚ್.ಆಂಜನೇಯ, ಡಿ.ಸುಧಾಕರ್, ಯು.ಟಿ.ಖಾದರ್, ರಮಾನಾಥ್ ರೈ, ಎಚ್.ಎಂ. ರೇವಣ್ಣ, ಶಿವಮೂರ್ತಿ ನಾಯಕ್, ಶಾಸಕರಾದ ಜಮೀರ್ ಅಹ್ಮದ್, ಟಿ.ರಘುಮೂರ್ತಿ, ಮಾಜಿ ಶಾಸಕರಾದ ಬಿ.ಜಿ. ಗೋವಿಂದಪ್ಪ, ಎ.ವಿ.ಉಮಾಪತಿ, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಮೆಹಬೂಬ್ ಪಾಷ, ಡಾ.ಬಿ.ಯೋಗೇಶ್‌ಬಾಬು, ಜೆಜೆಹಟ್ಟಿ ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss