Thursday, July 7, 2022

Latest Posts

ಭ್ರಮೆಯಲ್ಲಿ ತೇಲುತ್ತಿರುವ ಸಿದ್ದರಾಮಯ್ಯ: ಇಂಧನ ಸಚಿವ ಸುನಿಲ್ ಕುಮಾರ್

ಹೊಸದಿಗಂತ ವರದಿ,ಚಿತ್ರದುರ್ಗ:

ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯುತ್ತವೆ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಸರ್ಕಾರ ನಡೆಸುವ ಭ್ರಮೆಯಲ್ಲಿ ತೆಲುತ್ತಿದ್ದಾರೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಲೇವಡಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಾಂತರ ಕಾಯ್ದೆ, ಗೋ ಹತ್ಯೆ ಕಾನೂನು ನಿಷೇಧ ಮಾಡಿ, ಟಿಪ್ಪು ಜಯಂತಿ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ ರಾಜ್ಯದ ಜನತೆ ಓಬವ್ವ ಜಯಂತಿ ಮಾಡುವ ಬೊಮ್ಮಾಯಿ ಬೇಕೋ? ಟಿಪ್ಪು ಜಯಂತಿ ಮಾಡುವ ಸಿದ್ದರಾಮಯ್ಯ ಬೇಕೋ? ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಆಸೆ, ಆಮೀಷ ಒಡ್ಡಿ ಮತಾಂತರ ಮಾಡಬಾರದು ಎಂಬುದು ಕಾನೂನಿನಲ್ಲಿದೆ. ಇಂತಹ ಕಾನೂನನ್ನು ಜಾರಿಗೆ ತಂದಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಸಚಿವರು, ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡುವ ಹಾಗೂ ಮತಾಂತರ ಕಾಯ್ದೆ ನಿಷೇಧ ಮಾಡುವೆ ಎಂದು ಪ್ರತ್ಯೇಕ ಸಂದೇಶ ನೀಡುತ್ತಿದ್ದಾರೆ. ನಾವು ಇದನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸುತ್ತೇವೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಕರ್ನಾಟಕ ಬಂದ್ ಮಾಡುವ ಅನಿವಾರ್ಯತೆಯಿಲ್ಲ. ಘಟನೆಗೆ ಸಂಬಂಧಿಸಿದವರ ವಿರುದ್ದ ಈಗಾಗಲೇ ಸರ್ಕಾರ ಕ್ರಮ ಕೈಗೊಂಡಿದೆ. ಪುಂಡಾಟಿಕೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ನಮ್ಮ ಸಾಹಿತ್ಯ, ಭಾಷೆ ಸಂಸ್ಕೃತಿ ಬಗ್ಗೆ ಸರ್ಕಾರ ಪ್ರಥಮ ಆದ್ಯತೆ ನೀಡಿದೆ. ಇದರ ವಿರುದ್ಧ ಮಾತನಾಡುವವರ ಬಗ್ಗೆ ಸರ್ಕಾರ ಕ್ರಮವಹಿಸುತ್ತದೆ. ಗೃಹ ಇಲಾಖೆ ಎಚ್ಚರಿಕೆ ವಹಿಸಿದೆ ಎಂದ ಅವರು, ಕನ್ನಡ ಸಂಘಟನೆ, ಸಂಸ್ಥೆಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ಪ್ರತಿ ಬಾರಿ ಇಂಥ ಘಟನೆ ಆದಾಗ ಬಂದ್ ಮಾಡುವುದು ಸರಿಯಲ್ಲ. ಹಾಗಾಗಿ ಬಂದ್ ಕೈಬಿಡಿ ಎಂದು ಸುನೀಲ್ ಕುಮಾರ್ ಮನವಿ ಮಾಡಿದರು.
ಸಿಎಂ ಬದಲಾವಣೆ ವಿಚಾರ ನೂರಕ್ಕೆ ನೂರು ಊಹಾಪೂಹ. ಅಮಿತ್ ಷಾ ಹಿಂದೆ ದಾವಣಗೆರೆಗೆ ಬಂದಾಗ ಸ್ಪಷ್ಟಪಡಿಸಿದ್ದಾರೆ. ನಿನ್ನೆ ಅರುಣ್ ಸಿಂಗ್ ಅವರು ಕೂಡಾ ಅದನ್ನೇ ಹೇಳಿದ್ದಾರೆ. ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುತ್ತೇವೆ. ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಭವಿಷ್ಯ ನುಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss