ಹೊಸದಿಗಂತ ಆನ್ ಲೈನ್ ಡೆಸ್ಕ್:
ಯಾರಿಗೂ ಒಂದು ರೂಪಾಯಿ ತೆರಿಗೆ ಹಾಕಿಲ್ಲ, ಯಾರಿಗೂ ಹೊರೆಯಾಗದ ಬಜೆಟ್ ಇದಾಗಿದ್ದು, ಇತಿಹಾಸದಲ್ಲೇ ಇದು ಮೊದಲು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬಜೆಟ್ ಮಂಡನೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದ ಸಿಎಂ,8 ನೇ ಬಾರಿಗೆ ಬಜೆಟ್ ಮಂಡನೆ, ಕಳೆದ ವರ್ಷದ ಆಯವ್ಯಯದ ಗಾತ್ರಕ್ಕಿಂತಲೂ 8,314 ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಇದಾಗಿದೆ. ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಆರ್ಥಿಕ ವರ್ಷದ ಕಡೆಯ ತ್ರೈಮಾಸಿಕದಲ್ಲಿ ಪರಿಸ್ಥಿತಿ ತುಸು ಸುಧಾರಿಸಿದ್ದರಿಂದ ಈ ರೀತಿಯ ಬಜೆಟ್ ಮಂಡನೆ ಸಾಧ್ಯವಾಗಿದೆ. ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನದ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿರುವುದು ಸಮಾಧಾನ ತಂದಿದೆ, ಈ ದೃಷ್ಟಿಯಿಂದ ಇದು ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ ಆಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಈ ಹಿಂದಿನ ಎಲ್ಲಾ ಕಾರ್ಯಕ್ರಮಗಳು ಮುಂದುವರೆಯಲಿವೆ. ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇಕಡಾ 4ರ ರಿಯಾಯಿತಿ ದರದಲ್ಲಿ 2 ಕೋಟಿ ರೂಪಾಯಿವರೆಗೂ ಸಾಲ ಸೌಲಭ್ಯ ನೀಡಲಾಗಿದೆ. ಸಂಜೀವಿನಿ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವ-ಸಹಾಯ ಸಂಘಗಳ ಮೂಲಕ 6 ಸಾವಿರ ಸಣ್ಣ ಉದ್ಯಮಗಳ ಸ್ಥಾಪನೆಗೆ ನೆರವು ನೀಡಲಾಗುತ್ತದೆ. ಇದರಿಂದ 6೦ ಸಾವಿರ ಮಹಿಳೆಯರಿಗೆ ಅನುಕೂಲ ಆಗಲಿದೆ. ಬಜೆಟ್ನಲ್ಲಿ ಡೀಸೆಲ್, ಪೆಟ್ರೋಲ್ ಮೇಲೆ ತೆರಿಗೆ ಹಾಕಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ತೆರಿಗೆ ಕಡಿಮೆ ಇದೆ. ಯಾವುದೇ ಇಲಾಖೆಯಲ್ಲಿ ಅನುದಾನ ಕಡಿತ ಮಾಡಿಲ್ಲ ಎಂದರು.
ಈ ವೇಳೆ ವಿಪಕ್ಷ ನಾಯಕರ ಸದನ ಬಹಿಷ್ಕಾರ ವಿಚಾರಕ್ಕೆ ಉತ್ತರಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು,ದೇಶದ ಇತಿಹಾಸದಲ್ಲಿ ಬಜೆಟ್ ಅಧಿವೇಶನ ಬಹಿಷ್ಕಾರ ಮಾಡಿರುವ ನಿದರ್ಶನ ಇದೆಯಾ? ಫೇಸ್ ಮಾಡಲು ಯೋಗ್ಯತೆ ಇಲ್ಲದೇ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ 130-35 ಸ್ಥಾನ ಗೆಲ್ಲುವ ಮೂಲಕ ಅವರನ್ನು ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲಿ ಕೂರಿಸುತ್ತೇನೆ. ಹೆಚ್ಚು ಸ್ಥಾನ ಗೆಲ್ಲಲಿಲ್ಲ ಎಂದರೇ ನನ್ನನ್ನು ಯಡಿಯೂರಪ್ಪ ಅಂತಾನೇ ಕರೆಯಬೇಡಿ ಎಂದು ಸವಾಲು ಎಸೆದರು.
ಮುಂದಿನ ಚುನಾವಣೆಗೆ ಶಾಶ್ವತವಾಗಿ ಸಿದ್ದರಾಮಯ್ಯ ಅವರನ್ನು ವಿಪಕ್ಷದಲ್ಲೇ ಕೂರುವಂತೆ ಮಾಡುತ್ತೇನೆ. ಸಿದ್ದರಾಮಯ್ಯ ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲೇ ಕೂರಬೇಕು. ಅವರಿಗೆ ಪ್ರಶ್ನೆ ಮಾಡುವ ನೈತಿಕತೆ ಏನಿದೆ? ಇತ್ತೀಚೆಗೆ ಸಿದ್ದರಾಮಯ್ಯ ಅವರಿಗೆ ಮಾನಸಿಕವಾಗಿ ಸಮಸ್ಯೆಯಾಗಿದೆ. ಅವರಿಗೆ ಏನು ಮಾತನಾಡುತ್ತಿದ್ದಾರೆ ಅವರಿಗೆ ಗೊತ್ತಿಲ್ಲ . ಸಿದ್ದರಾಮಯ್ಯ ಏನು ನಮ್ಮ ಬಗ್ಗೆ ಹೇಳೋದು? ಅವರು ಸದನಕ್ಕೆ ಬರಲಿ, ನಾವು ಅವರ ಕಾಲದಲ್ಲಿ ಏನೇನು ಆಗಿದೆ ಎಂದು ಸದನದಲ್ಲಿ ಬಿಚ್ಚಿಡುತ್ತೇವೆ. ಸದನಕ್ಕೆ ಬರಲಿ ಎಂದು ಸಿಎಂ ಅವರು ಸಿದ್ದರಾಮಯ್ಯಗೆ ಸವಾಲು ಎಸೆದರು.