ಹೊಸ ದಿಗಂತ ವರದಿ,ಮೈಸೂರು:
ಕರ್ನಾಟಕ ರಾಜಕಾರಣ ಅಧೋಗತಿಗೆ ಹೋಗಿದೆ. ನಾಡನ್ನು ಆಳ್ವಿಕೆ ಮಾಡಿದವರಲ್ಲಿ ಎಂತಹ ಮಹಾನ್ ನಾಯಕರು ಇದ್ದಾರೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಧೂಳೀಪಟ ಮಾಡಿಬಿಟ್ಟರು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ನಡೆದಿರುವ ಬಹುಕೋಟಿ ನಿವೇಶನ ಹಂಚಿಕೆ ಹಗರಣಕ್ಕೆ ಸಂಬoಧಿಸಿದoತೆ ಪಾದಯಾತ್ರೆ, ಜನಾಂದೋಲನ ಸಮಾವೇಶದುದ್ದಕ್ಕೂ ಕಾಂಗ್ರೆಸ್, ಬಿಜೆಪಿ-ಜಾ.ದಳದ ನಾಯಕರು ಜನರಿಗೆ ಕೊಟ್ಟ ಸಂದೇಶ ಏನು ಕೊಟ್ಟರು. ಮುಡಾ ವಿಚಾರದಲ್ಲಿ ಕಾನೂನು ತೀರ್ಮಾನ ಮಾಡುತ್ತದೆ. ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು ಸಿದ್ದರಾಮಯ್ಯನವರೇ. ನಮಗೆ ಸೈಟು ಕೊಡುತ್ತಾರೆ ಅಂತ ಜನರು ಕಾದರೆ, ಸಿಎಂ ಹೆಂಡತಿಗೆ ನಿವೇಶನಗಳನ್ನು ಕೊಟ್ಟಿದ್ದಾರೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ನಿವೇಶನ ಕೊಡಲಿಲ್ಲ. ಅಂದು ಬಡವರಿಗೆ ನಿವೇಶನ ಕೊಡುವ ಮಾತನಾಡಲಿಲ್ಲ, ಮುಡಾವನ್ನು ಕ್ಲೀನ್ ಮಾಡುತ್ತೇವೆ ಎನ್ನುವ ಮಾತನ್ನು ಕೂಡ ಹೇಳಲಿಲ್ಲ. ವೈಯಕ್ತಿಕ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ನಾನೊಬ್ಬ ಅಹಿಂದ ಸಿಎಂ ಎನ್ನುವುದು ಹಾಸ್ಯಾಸ್ಪದ. ಒಕ್ಕಲಿಗರು, ಲಿಂಗಾಯತರು ವೋಟ್ ಹಾಕಲಿಲ್ಲವೇ, ನೀವು ಮೊದಲು ಸರಿಯಿರಬೇಕು, ಅಮೇಲೆ ಬೇರೆಯವರ ಬಗ್ಗೆ ಮಾತನಾಡಬೇಕು ಎಂದು ಟೀಕಿಸಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಕಾಲು ಕೆರೆದುಕೊಂಡು ಮೈಸೂರು ರಾಜವಂಶಸ್ಥರ ಆಸ್ತಿ ವಿಚಾರದಲ್ಲಿ ಕೈ ಹಾಕುತ್ತಾರೆ.ಉಪ ಮುಖ್ಯಮಂತ್ರಿ ಆಗಿದ್ದಾಗ ಕೈ ಹಾಕಿದ್ರು. ಈಗ ಸಿಎಂ ಆಗಿದ್ದಾಗಲೂ ಕೈಹಾಕಿದ್ದಾರೆ ಎಂದು ಕಿಡಿಕಾರಿದರು. ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರವೇ ಬೇರೆ. ಚಾಮುಂಡಿಬೆಟ್ಟ ಪ್ರಾಧಿಕಾರ ಬೇರೆಯಾಗಿದೆ. ಚಾಮುಂಡಿ ಬೆಟ್ಟ ನಾಡದೇವತೆ ನೆಲೆಸಿರುವ ಸ್ಥಳ. ಅದರ ಪಾಡಿಗೆ ಅದು ನಡೆದುಕೊಂಡು ಹೋಗಲು ಬಿಡಬೇಕು. ನಾನೊಬ್ಬ ಸವಾಜವಾದಿ ಎನ್ನುತ್ತಲೇ ತೀಟೆ ಮಾಡಲು ಹೋಗುತ್ತಾರೆ. ಮೊದಲು ಜನರಿಗೆ ನಿವೇಶನ ಕೊಡಲು ಗಮನಕೊಡಿ ಎಂದು ಟಾಂಗ್ ಕೊಟ್ಟರು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನನ್ನ ಮೇಲೆ ೫೦ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲು ನೋಟಿಸ್ ಕೊಟ್ಟಿದ್ದಾರೆ. ಹೆದರಿಸಲು ಬರಬೇಡ. ನಾನೂ ಅಡ್ವೋಕೇಟ್ ,ನನಗೂ ಕಾನೂನು ಗೊತ್ತಿದೆ ಎಂದು ತಿರುಗೇಟು ನೀಡಿದರು. ಮುಡಾ ಹಗರಣ ತನಿಖೆ ಮಾಡುತ್ತೇವೆ ಎಂದರು. ಅದಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ಭೈರತಿ ಸುರೇಶ್ ಬಂದು ಹೋದ. ಈಗ ಏನಾಯ್ತು?ನೀವು ಬಂದು ಹೋದ ಮೇಲೂ ಮುಡಾದಲ್ಲಿ ೫೦೦ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಭೈರತಿ ಸುರೇಶ್ ೫೦ ಕೋಟಿ ರೂ.ಕೇಳಿದರೆ, ಸಿದ್ದರಾಮಯ್ಯ ೬೨ ಕೋಟಿ ರೂಪಾಯಿ ಕೇಳುತ್ತಿದ್ದಾರೆ ಎಂದು ಟೀಕಿಸಿದರು.