ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
ಹೊಸ ದಿಗಂತ ವರದಿ, ಚಿತ್ರದುರ್ಗ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಹಿರಿಯ ನಾಯಕ, ಅವರ ಬಗ್ಗೆ ನನಗೆ ಗೌರವವಿದೆ ಎಂದು ಸಮಾಜ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಮೊಳಕಾಲ್ಮುರು ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯ ಹಾಗೂ ನಾವು ಸೇರಿದಂತೆ ಅನೇಕರು ತಳಸಮುದಾಯಗಳಿಂದ ಬಂದಿದ್ದೇವೆ. ಹಾಗಾಗಿ ನಾವು ಪರಸ್ಪರ ಗೌರವ ಭಾವನೆ ಹೊಂದಿರಬೇಕು ಎಂದರು.
ಸಿದ್ದರಾಮಯ್ಯ ಅವರು ಕಳೆದ ಅನೇಕ ವರ್ಷಗಳಿಂದ ಹಿಂದುಳಿದವರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅಂಥವರನ್ನು ನಾವು ಗೌರವಿಸಬೇಕು. ರಾಜಕೀಯ ವಿಚಾರ ಬಂದಾಗ ವಿರೋಧಿಸುವುದು ಸಹಜ. ರಾಜಕಾರಣದಲ್ಲಿ ನಮ್ಮ ಪಕ್ಷದ ಸಿದ್ಧಾಂತ ನಮ್ಮದು. ಅವರ ಪಕ್ಷದ ಸಿದ್ಧಾಂತ ಅವರದ್ದು. ಆದರೆ ವ್ಯಕ್ತಿತ್ವ ಹಾಗೂ ಹಿಂದುಳಿದ ಸಮಾಜದ ವಿಚಾರದಲ್ಲಿ ನಾನು ಅವರನ್ನು ಗೌರವಿಸುತ್ತೇನೆ ಎಂದು ಹೇಳಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಮತ್ತೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿ. ಆದರೆ ನನ್ನ ಸ್ಪರ್ಧೆ ಕುರಿತು ಆಯಾ ಸಂದರ್ಭದಲ್ಲಿ ಪಕ್ಷ ನಿರ್ಧರಿಸುತ್ತದೆ. ದೊಡ್ಡ ದೊಡ್ಡ ವ್ಯಕ್ತಿಗಳು ಎರಡು ಕಡೆ ಸ್ಪರ್ಧೆ ಮಾಡುತ್ತಾರೆ. ವಾಲ್ಮೀಕಿ ಸಮಾಜದಿಂದ ಬಂದ ನನಗೆ ಕಳೆದ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿಸುವ ಅವಕಾಶ ದೊರೆಯಿತು. ಅದು ಭಗವಂತ ನೀಡಿದ ಅವಕಾಶ ಎಂದು ಭಾವಿಸುತ್ತೇನೆ.
ಬಾದಾಮಿ ಜನ ಬೆಂಬಲಿಸಿದರು. ಸ್ವಲ್ಪದರಲ್ಲೇ ಸೋಲಾಯಿತು. ಯಾರ್ಯಾರ ಹಣೆಬರಹ ಹೇಗಿದೆಯೋ ಯಾರಿಗೂ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮತದಾರರು ರಾಜಕೀಯ ನಾಯಕರ ಹಣೆಬರಹ ಬರೆಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.