ಸ್ವಾತಂತ್ರ್ಯಹೋರಾಟದಲ್ಲಿ ಆರೆಸ್ಸೆಸ್ ಪಾತ್ರದ ಬಗ್ಗೆ ಸಿದ್ದರಾಮಯ್ಯ ಇತಿಹಾಸ ಓದಿ ಅರಿಯಲಿ: ಬಿಜೆಪಿ ತಿರುಗೇಟು

ಹೊಸದಿಗಂತ ವರದಿ, ಮಂಡ್ಯ:
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ನಷ್ಟೆ ಸಂಘ ಪರಿವಾರದ ಕೊಡುಗೆಯೂ ಇದೆ. ಇದಕ್ಕೆ ಇತಿಹಾಸ ಪುಟಗಳನ್ನೊಮ್ಮೆ ತಿರುವಿದರೆ ತಿಳಿಯುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಸ್ವಾತಂತ್ರ್ಯದ ಕಿಡಿ ಹೊತ್ತಿಸಿ ರಾಷ್ಟ್ರಕ್ಕಾಗಿ ಹೋರಾಡಿ ಬಲಿದಾನ ಮಾಡಿದ ಮಹನೀಯರೆಲ್ಲರೂ ಕಾಂಗ್ರೆಸ್‌ನವರಲ್ಲ, ಇದರಲ್ಲಿ ಸಂಘ ಪರಿವಾರದ ಕಾರ‌್ಯಕರ್ತರು, ದೇಶಾಭಿಮಾನಿಗಳೂ ಇದ್ದರು. ಮಹಾತ್ಮಾಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಾಂಗ್ರೆಸ್‌ನ್ನು ಬಳಸಿಕೊಂಡಿದ್ದರು. ಸ್ವಾತಂತ್ರ್ಯ ದೊರೆತ ಮೇಲೆ ಕಾಂಗ್ರೆಸ್ಸನ್ನು ವಿಸರ್ಜಿಸುವಂತೆಯೂ ಸಲಹೆ ನೀಡಿದ್ದರು. ಆದರೆ ಒಂದು ಕುಟಂಬ ನಕಲಿ ಕಾಂಗ್ರೆಸ್ ಹೆಸರಿನಲ್ಲಿ ದೇಶದಲ್ಲಿ ಆಡಳಿತ ನಡೆಸಿದ್ದನ್ನು ಯಾರೂ ಮರೆತಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಕಾಂಗ್ರೆಸ್‌ನಂತೆ ಆರ್‌ಎಸ್‌ಎಸ್ ಕೂಡಾ ಪಾಲ್ಗೊಂಡಿತ್ತು. ದೌರ್ಭಾಗ್ಯವೆಂಬಂತೆ ಇದಕ್ಕೆ ಸಂಬಂಧಿಸಿದ ಇತಿಹಾಸವನ್ನು ಕೇವಲ ಒಂದು ಕುಟುಂಬಕ್ಕೆ ಸಂಬಂಧಿಸಿದಂತೆ ಬರೆಯಲಾಗಿದೆ. ಹೀಗಾಗಿ ಆರ್‌ಎಸ್‌ಎಸ್ ಈ ಸಂಗ್ರಾಮದಲ್ಲಿ ಭಾಗವಹಿಸಿದ ಮಾಹಿತಿ ಜನರಿಗೆ ತಲುಪಿಲ್ಲ ಎಂದು ತಿಳಿಸಿದ್ದಾರೆ.
ಸಂಘವು ಹೆಸರು ಹೇಳಿಕೊಂಡು ಏನನ್ನೂ ಮಾಡುತ್ತಿರಲಿಲ್ಲ. ಹೆಸರು ಹಾಗೂ ಸಂಸ್ಥೆಯ ಹೆಸರನ್ನು ಬಿಟ್ಟು ರಾಷ್ಟ್ರ ಹಿತಕ್ಕಾಗಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕಾಂಗ್ರೆಸ್‌ನ ಎಲ್ಲಾ ಆಂದೋಲನಗಳಲ್ಲೂ ಸ್ವಯಂ ಸೇವಕರು ಭಾಗವಹಿಸಿದ್ದಾರೆ. ರಾಷ್ಟ್ರೀಯ ಸೇವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರೇ ವರ್ಷಾನುಗಟ್ಟಲೆ ಜೈಲಿನಲ್ಲಿದ್ದುದ್ದನ್ನು ಕಾಂಗ್ರೆಸ್ ಮರೆತಂತೆ ಕಾಣುತ್ತಿದೆ ಎಂದು ದೂರಿದರು.
ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಕುದೀರ್ ಅಂಬೋಸ್, ಚಾಪೇಕರ್ ಸಹೋದರರು, ಮದನ್‌ಲಾಲ್ ಡಿಂಗ್ರಾಘಿ, ಸಂಗೊಳ್ಳಿ ರಾಯಣ್ಣಘಿ, ರಾಣಿ ಅಬ್ಬಕ್ಕ, ಸಿಂಧೂರ ಲಕ್ಷ್ಮಣ, ಭಗತ್‌ಸಿಂಗ್ ಸೇರಿದಂತೆ ಮೂರೂವರೇ ಲಕ್ಷ ಮಂದಿ ಬಲಿದಾನ ಮಾಡಿದ್ದಾರೆ. 16 ಸಾವಿರ ಸ್ವಯಂ ಸೇವಕರು ಅಂಡಮಾನ್ ಜೈಲಿನಲ್ಲಿದ್ದರು. ಅವರ ಹೆಸರನ್ನು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಅಳಿಸಿಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ಗಾಂಧೀಜಿ ಬಂಧನದಿಂದ ನಡೆಯುತ್ತಿದ್ದ 1921ರ ಅಸಯೋಗ ಚಳವಳಿಯಲ್ಲಿ ಡಾ. ಹೆಡ್ಗೇವಾರ್ ಕೂಡ ಭಾಗವಹಿಸಿ ಜೈಲಿಗೆ ಹೋಗಿದ್ದರು. 1922ರ ಜುಲೈ 12ರಂದು ಜೈಲಿನಿಂದ ಬಿಡುಗಡೆಯಾಗಿ, 1925ರಲ್ಲಿ ವಿಜಯದಶಮಿ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದ್ದರು. ಇದನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಮರೆತಂತೆ ಕಾಣುತ್ತಿದೆ. ಇತಿಹಾಸದ ಬಗ್ಗೆ ಅರಿವಿಲ್ಲದಿದ್ದರೆ, ರಾಷ್ಟ್ರೀಯ ಸೇವಕ ಸಂಘದ ಪ್ರಚಾರಕರಾಗಿದ್ದ ಸೆಹಗಲ್ ಅವರು ಸಾಕ್ಷಿ ಸಮೇತ ಸಂಗ್ರಹಿಸಿ ಬರೆದಿರುವ ಪುಸ್ತಕವನ್ನು ಕಾಂಗ್ರೆಸ್ಸಿಗರೆ ಕಳುಹಿಸಿಕೊಡುತ್ತೇವೆ. ಸಮಯವಿದ್ದರೆ ಓದಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇನ್ನಾದರೂ ಕಾಂಗ್ರೆಸ್ಸಿಗರು ಇತಿಹಾಸ ತಿಳಿಯದೆ ಜನರಿಗೆ ಗೊಂದಲದ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಇತಿಹಾಸ ತಿಳಿದ ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!