ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………….
ಹೊಸ ದಿಗಂತ ವರದಿ, ವಿಜಯಪುರ:
ಜಿಲ್ಲೆಯಲ್ಲಿ ಜೂ.14 ರ ಬೆಳಗ್ಗೆ 6 ರಿಂದ ಜೂ.21 ರ ಬೆಳಗ್ಗೆ 6 ರ ವರೆಗೆ, ಕೋವಿಡ್ ಲಾಕ್ಡೌನ್ ನಿಯಮದ ಪರಿಷ್ಕೃತ ಮಾರ್ಗಸೂಚಿ ಜಾರಿಗೊಳಿಸಿದ್ದು, ಅಗತ್ಯ ವಸ್ತುಗಳ ಮಾರಾಟ ಅವಧಿಯನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿದ ಅವರು, ಅಗತ್ಯ ವಸ್ತುಗಳ ಮಾರಾಟದ ಅವಧಿ ವಿಸ್ತರಣೆಯಾಗಿದ್ದು, ಆಹಾರ, ಬೇಳೆಕಾಳು, ಹಣ್ಣು, ತರಕಾರಿ, ಮಾಂಸ, ಮೀನು, ಡೇರಿ, ಮಿಲ್ಕ ಬೂತ್, ಪಶು ಮೇವುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೀದಿ ಬದಿ ವ್ಯಾಪಾರಕ್ಕೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾಲಾವಕಾಶ ದೊರಕಿಸಲಾಗಿದೆ. ಪ್ರಯಾಣಿಕರ ಪ್ರಯಾಣಕ್ಕಾಗಿ ಆಟೋ, ಟ್ಯಾಕ್ಸಿಗಳಿಗೆ ಅವಕಾಶ ನೀಡಲಾಗಿದ್ದು, ಇಬ್ಬರು ಮಾತ್ರ ಪ್ರಯಾಣಿಸಬಹುದು. ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು ಸಿಮೆಂಟ್, ಕಬ್ಬಿಣದ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಗಾರ್ಮೆಂಟ್ಸ್ ಗಳಿಗೆ ಶೇ. 30 ರಷ್ಟು ಅವಕಾಶವಿದ್ದು, ಉಳಿದ ಕಾರ್ಖಾನೆಗಳಿಗೆ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಪಾರ್ಕ್ಗಳನ್ನು ತೆಗೆಯಬಹುದಾಗಿದ್ದು, ಬೆಳಗ್ಗೆ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೆಳಗ್ಗೆ 5 ರಿಂದ ಬೆಳಗ್ಗೆ 10 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯ ತರಬೇತಿಗಳಿಗೆ ಅವಕಾಶ ನೀಡಲಾಗಿದೆ, ಕನ್ನಡಕ ಅಂಗಡಿಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ತೆರೆಯಬಹುದಾಗಿದೆ. ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಣೆಗೆ ಅವಕಾಶ ನೀಡಲಾಗಿರುತ್ತದೆ.
ಆದರೆ ಕೆಲವೊಂದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಅಗತ್ಯ ವಸ್ತು ಹೊರತುಪಡಿಸಿ ಉಳಿದ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ. ಕೆಎಸ್ಆರ್ಟಿಸಿ, ಖಾಸಗಿ ಬಸ್ ಸಂಚಾರವಿಲ್ಲ. ಈಜುಕೊಳ, ಜಿಮ್, ಸಿನಿಮಾ, ಮಾಲ್, ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧ ವಿಧಿಸಲಾಗಿದೆ. ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಖಾಸಗಿ ಅಗತ್ಯ ಸೇವೆ ವ್ಯಾಪ್ತಿಗೆ ಬಾರದ ಸರ್ಕಾರಿ ಕಚೇರಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಮೊದಲು ನಿಗದಿತ ಮದುವೆಗಳನ್ನು ಮನೆಯಲ್ಲಿ ಮಾತ್ರ ನೆರವೇರಿಸಬಹುದಾಗಿದ್ದು, 40 ಜನ ಸಂಬಂಧಿಗಳಿಗೆ ಮಾತ್ರ ಅವಕಾಶವಿದೆ. ಶವಸಂಸ್ಕಾರ ಅಥವಾ ಅಂತ್ಯಕ್ರಿಯೆ ವೇಳೆ 5 ಜನರಿಗೆ ಮಾತ್ರ ಅವಕಾಶವಿದೆ. ರಾಜ್ಯ ವ್ಯಾಪ್ತಿ ರಾತ್ರಿ ಹಾಗೂ ವಾರಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ರೈಲು, ವಿಮಾನ ಸೇವೆ ಎಂದಿನಂತೆ ಅವಕಾಶವಿದ್ದು, ಟಿಕೆಟ್ ಅನ್ನು ಪಾಸ್ ರೀತಿಯಲ್ಲಿ ಬಳಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.