ಒಪ್ಪಿಗೆ ಇಲ್ಲದೆ ವಿವಾಹವಾದ ಅಕ್ಕನ ಮಗಳು: ಊಟಕ್ಕೆ ವಿಷ ಹಾಕಿದ ಶಕುನಿ ಮಾವ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಮದುವೆ ಅಂದ್ರೆ ಎರಡು ಕುಟುಂಬದಲ್ಲಿ ಭಾರೀ ಸಂಭ್ರಮ ಮನೆ ಮಾಡಿರುತ್ತೆ. ಮದುವೆ ಮನೆಯಲ್ಲಿ ಸಂಬಂಧಿಕರ ಪಾತ್ರ ಕೂಡ ಹೆಚ್ಚಿರುತ್ತೆ. ಇನ್ನೂ ವಧುವಿನ ಮಾವ ಅಂದ್ರೆ ಶಾಸ್ತ್ರಕ್ಕೂ ಬೇಕು. ಆದ್ರೆ ಇಲ್ಲೊಬ್ಬ ಶಕುನಿ ಮಾವ ಮದುವೆ ಮನೆಯಲ್ಲಿ ಎಡವಟ್ಟು ಮಾಡಿದ್ದಾನೆ.

ತನ್ನ ಮನೆಯಲ್ಲೇ ಬೆಳೆದು, ತನ್ನ ಒಪ್ಪಿಗೆ ಇಲ್ಲದೆ ಪ್ರೀತಿಸಿದವನ ಜೊತೆ ಓಡಿಹೋಗಿ ಮದುವೆಯಾದ ಸೋದರ ಸೊಸೆಯ ಮೇಲೆ ಮಾವನೊಬ್ಬ ಹಗೆ ಸಾಧಿಸಿದ್ದಾನೆ. ಸೊಸೆ ಮತ್ತು ಆಕೆ ಪತಿಯ ಕುಟುಂಬಸ್ಥರನ್ನು ನಾಶ ಮಾಡಲು ಆಹಾರದಲ್ಲಿ ವಿಷ ಬೆರೆಸಿದ್ದಾನೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಉತ್ರೆ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ನೂತನವಾಗಿ ವಿವಾಹವಾದ ದಂಪತಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದಾಗ, ಅಲ್ಲಿಗೆ ನುಗ್ಗಿದ ಸೋದರಮಾವ ಅತಿಥಿಗಳಿಗೆ ಉಣಬಡಿಸಲು ಸಿದ್ಧ ಮಾಡಿದ್ದ ಆಹಾರದಲ್ಲಿ ಬಲವಂತವಾಗಿ ವಿಷ ಹಾಕಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸಹೋದರಿಯ ಮಗಳು ತನ್ನ ಒಪ್ಪಿಗೆ ಇಲ್ಲದೆ, ಗ್ರಾಮದ ಯುವಕನ ಜೊತೆಗೆ ಓಡಿಹೋಗಿ ವಿವಾಹವಾಗಿದ್ದಕ್ಕೆ ಆರೋಪಿ ಮಹೇಶ್​ ಪಾಟೀಲ್​ ತೀವ್ರ ಕೋಪಗೊಂಡಿದ್ದಾನೆ. ತನ್ನ ಸೋದರ ಸೊಸೆಗೆ ಬುದ್ಧಿ ಕಲಿಸಲು ಆತ ಹೊಂಚು ಹಾಕಿದ್ದ. ಅದರಂತೆ ನೂತನ ದಂಪತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ನುಗ್ಗಿದ್ದಾನೆ ಎಂದು ತಿಳಿಸಿದ್ದಾರೆ.

ಆರೋಪಿ ಊಟಕ್ಕೆ ವಿಷಪ್ರಾಶನ ಮಾಡುತ್ತಿರುವುದನ್ನು ಅಲ್ಲಿದ್ದವರು ನೋಡಿದ್ದರಿಂದ ಆಹಾರವನ್ನು ಅತಿಥಿಗಳಿಗೆ ಬಡಿಸಿಲ್ಲ. ಇದರಿಂದ ಘೋರ ದುರಂತವೊಂದು ತಪ್ಪಿದೆ. ಬಂಧುಗಳು ಯಾರೂ ಆಹಾರ ಸೇವಿಸಿಲ್ಲ. ಅದರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಸೋದರ ಮಾವ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜನರ ಪ್ರಾಣಕ್ಕೆ ಅಪಾಯವನ್ನುಂಟು ಮಾಡಿದ ಆರೋಪದ ಮೇಲೆ ಆರೋಪಿ ಮಹೇಶ್​ ಪಾಟೀಲ್​​ ವಿರುದ್ಧ ಪನ್ಹಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನೂತನ ವಧು, ಸೋದರ ಮಾವನ ಮನೆಯಲ್ಲಿ ಬೆಳೆದಿದ್ದಳು. ಹೀಗಾಗಿ, ಆತ ಕೋಪದಲ್ಲಿ ಇಂತಹ ದುಷ್ಕೃತ್ಯಕ್ಕೆ ಕೈಹಾಕಿದ್ದಾನೆ ಎಂದು ಪನ್ಹಾಳ ಪೊಲೀಸ್ ಠಾಣೆಯ ಸಬ್​​ಇನ್ಸ್‌ಪೆಕ್ಟರ್ ಮಹೇಶ್ ಕೊಂಡುಭೈರಿ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!