Tuesday, June 28, 2022

Latest Posts

ಭಾವನೆ, ಆಲೋಚನೆಗಳನ್ನು ಪರಿಶುದ್ಧಗೊಳಿಸುವುದೇ ಶಿವಯೋಗ: ಡಾ. ಶಿವಮೂರ್ತಿ ಮುರುಘಾ ಶರಣರು

ಹೊಸದಿಗಂತ ವರದಿ, ಹಾವೇರಿ:

ಭಾವನೆ, ಆಲೋಚನೆಗಳನ್ನು ಪರಿಶುದ್ಧಗೊಳಿಸುವುದೇ ಶಿವಯೋಗ. ನಿಮ್ಮ ಬದುಕಿನ ಶಿಲ್ಪಿಗಳು ನೀವೇ. ಗುರುಗಳು ಮಾರ್ಗದರ್ಶನ ಮಾಡುತ್ತಾರೆ. ಅದನ್ನು ಬದುಕಿನಲ್ಲಿ ಆಚರಿಸಿಕೊಂಡು ಭವ್ಯ ಬದುಕು ರೂಪಿಸಿಕೊಳ್ಳಿ ಎಂದು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಹೊಸಮಠದಲ್ಲಿ ಸೋಮವಾರ ಲಿಂ.ಜಗದ್ಗುರು ನೈಘಂಟಿನ ಸಿದ್ಧಬಸವ ಮುರುಘಾ ರಾಜೇಂದ್ರ ಸ್ವಾಮೀಜಿ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಸ್ಮರಣೋತ್ಸವ ನಿಮಿತ್ತ ಶರಣ ಸಂಸ್ಕೃತಿ ಉತ್ಸವ ೨೦೨೧ ಅಂಗವಾಗಿ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಸಹಜ ಶಿವಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟು ಮಾತನಾಡಿದರು.
ಈ ಜಗತ್ತಿನಲ್ಲಿ ಕದಿಯಲಾರದವರು ಯಾರೂ ಇಲ್ಲ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎಲ್ಲರೂ ಕದಿಯುತ್ತಾರೆ. ಕಳ್ಳತನ ಎಂಬುದು ಮಹಾ ಅಪರಾಧ. ಹೀಗಾಗಿಯೇ ಬಸವಣ್ಣನವರು ಕಳಬೇಡ, ಕೊಲಬೇಡ ಎಂದು ವಚನದಲ್ಲಿ ಸಂದೇಶ ಸಾರಿದರು. ಕದಿಯಲಾರದ ಆಭರಣಗಳೆಂದರೆ ವಿಭೂತಿ ಮತ್ತು ರುದ್ರಾಕ್ಷಿ ಮಾತ್ರ ಎಂದರು.
ಅಂತರಾಳ ಚೆನ್ನಾಗಿಟ್ಟುಕೊಳ್ಳಲು ಧ್ಯಾನ ಮಾಡಿ. ತೋರಿಕೆಗಾಗಿ, ಸಂಪ್ರದಾಯಕ್ಕಾಗಿ ಧ್ಯಾನ ಮಾಡುವುದರಿಂದ ಪ್ರತಿಫಲ ಸಿಗುವುದಿಲ್ಲ. ಪರಿವರ್ತನೆಗಾಗಿ ಶಿವಯೋಗ ಆಚರಿಸಿ. ಹಣದ ಲೆಕ್ಕಾಚಾರ, ಗುಣಾಕಾರವೇ ಬದುಕಲ್ಲ. ಭವ್ಯ ಬದುಕನ್ನು ರೂಪಿಸಿಕೊಳ್ಳಲು ಬೌದ್ಧಿಕ ತಾಲೀಮು ಅಗತ್ಯ. ತಪ್ಪುಗಳ ಪರಿಷ್ಕಾರ, ಆಲೋಚನೆಗಳ ಆವಿಷ್ಕಾರವೇ ಶಿವಯೋಗ ಎಂದು ಹೇಳಿದರು.
ಎಲ್ಲರೂ ಏಕದೇವೋಪಾಸನೆ ಮಾಡಿ, ಇಷ್ಟಲಿಂಗ ಪೂಜೆ ಮಾಡಿ, ಹಣಕ್ಕಿಂತ ಆಸ್ತಿಗಿಂತ ಗುರುಗಳ ಆಶೀರ್ವಾದ ಶ್ರೇಷ್ಠವಾದುದು ಎಂದು ತಿಳಿಸಿದರು. ನೂರಾರು ಸಂಖ್ಯೆಯಲ್ಲಿ ಶಿವಯೋಗ ಆಸಕ್ತರು ಪಾಲ್ಗೊಂಡು ವಿಭೂತಿ ಪೂಜೆ ಮತ್ತು ವಿಭೂತಿ ಧಾರಣೆ ಮಾಡಿ ಇಷ್ಟಲಿಂಗ ಪೂಜೆಯ ಮೂಲಕ ಸಹಜ ಶಿವಯೋಗ ಆಚರಿಸಿದರು.
ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಶಿವಾನಂದಮಠದ ಮಹಾಂತ ಸ್ವಾಮೀಜಿ, ರಾಣೆಬೆನ್ನೂರು ವಿರಕ್ತಮಠದ ಗುರುಬಸವ ಸ್ವಾಮೀಜಿ, ದಾವಣಗೆರೆಯ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಭೋವಿಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಮನೋಹರ ಅಬ್ಬಿಗೆರೆ, ಡಾ.ಬಸವರಾಜ ಹಳ್ಳೂರ, ಡಾ.ಉಮೇಶ ಹಿರೇಮಠ, ಪರಮೇಶಪ್ಪ ಮೇಗಳಮನಿ, ರವಿ ಪೂಜಾರ, ನಾಗೇಂದ್ರ ಕಟಕೋಳ, ರುದ್ರೇಶ ಚಿನ್ನಣ್ಣನವರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss