ಹೊಸ ದಿಗಂತ ವರದಿ, ಚಿತ್ರದುರ್ಗ:
ರೇಷ್ಮೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದ 3 ಲಕ್ಷ ರೂ.ಗಳ ಸಪ್ಲೈ ಬಿಲ್ ಮುಂಜೂರು ಮಾಡಲು 30 ಸಾವಿರ ರೂ. ಲಂಚದ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ ರೇಷ್ಮೆ ಇಲಾಖೆಯ ರೇಷ್ಮೆ ಪ್ರದರ್ಶಕ ಶಿವಕುಮಾರ್ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಸಂತೋಷ್ಕುಮಾರ್ ಎಂಬುವರು ತಮ್ಮ ಹೆಸರಿನಲ್ಲಿರುವ 2.20 ಎಕರೆ ಜಮೀನಿನಲ್ಲಿ ರೇಷ್ಮೆ ಮನೆ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಬರಬೇಕಾದ ಸಹಾಯಧನ ಮುಂಜೂರಾತಿಗೆ ರೇಷ್ಮೆ ಇಲಾಖೆಗೆ ಹೋಗಿದ್ದರು. ರೇಷ್ಮೆ ಪ್ರದರ್ಶಕ ಶಿವಕುಮಾರ್ ಸಹಾಯಧನ ಮುಂಜೂರು ಮಾಡಲು 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡದ ಕಾರಣ ಸಹಾಯಧನಕ್ಕೆ ಮುಂಜೂರಾತಿ ನೀಡದೆ ಸತಾಯಿಸುತ್ತಿದ್ದರು.
ಇದರಿಂದ ಬೇಸತ್ತ ರೈತ ಸಂತೋಷ್ಕುಮಾರ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಲ್ಲದೇ ಮಾ.16 ರಂದು ರೇಷ್ಮೆ ಇಲಾಖೆಗೆ ಹೋಗಿ ಸಹಾಯಧನ ಮುಂಜೂರಾತಿ ಬಗ್ಗೆ ವಿಚಾರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ರೇಷ್ಮೆ ಪ್ರದರ್ಶಕ ಶಿವಕುಮಾರ್ 10 ಸಾವಿರ ರೂ.ಗಳ ಲಂಚದ ಹಣವನ್ನು ಸಂತೋಷ್ಕುಮಾರ್ ಅವರಿಂದ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.