spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಿತ್ತಾದ ಚಿಪ್ ಉದ್ಯಮ – ಸ್ಮಾರ್ಟ್ ಫೋನ್, ಟಿವಿಗಳ ಹಬ್ಬದ ಮಾರಾಟದ ಮೆರಗು ಇರದು ಈ ಬಾರಿ

- Advertisement -Nitte

ಹೊಸದಿಗಂತ ಆನ್ಲೈನ್ ಡೆಸ್ಕ್:

ದಸರಾ, ದೀಪಾವಳಿ. ಭಾರತದಮಟ್ಟಿಗೆ ಇದು ಕೇವಲ ಹಬ್ಬದ ಸೀಸನ್ ಮಾತ್ರ ಅಲ್ಲ, ಮಾರಾಟದ ಅವಧಿಯೂ ಹೌದು. ಬಟ್ಟೆ-ಚಿನ್ನ ಇಂಥವುಗಳ ಖರೀದಿಯೆಲ್ಲ ಒಂದೆಡೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿ ದೊಡ್ಡಮಟ್ಟದಲ್ಲಿ ಯುವ ಜನಾಂಗ ಮತ್ತು ಮಧ್ಯಮವರ್ಗದವರ ನಡುವೆ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ಎಲ್ಲ ಇ-ಕಾಮರ್ಸ್ ತಾಣಗಳು ಹಾಗೂ ಅಂಗಡಿಗಳು ಸಹ ಹಬ್ಬದ ರಿಯಾಯತಿಯನ್ನು ದೊಡ್ಡಮಟ್ಟದಲ್ಲಿ ಪ್ರಚಾರ ಮಾಡುವುದರಿಂದ, ಹೊಸ ಸ್ಮಾರ್ಟ್ಫೋನ್ ಕೊಳ್ಳುವುದೋ ಅಥವಾ ಮನೆಗೆ ದೊಡ್ಡ ಪರದೆಯ ಟಿವಿ ತರುವುದೋ ಇವಕ್ಕೆಲ್ಲ ಹಬ್ಬದ ಮುಹೂರ್ತವನ್ನೇ ಎದಿರು ನೋಡುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಬೆಳೆದಿದೆ.

ಆದರೆ, ಈ ಬಾರಿಯ ಹಬ್ಬ ಈ ನಿಟ್ಟಿನಲ್ಲಿ ಮಂಕಾಗುವ ಲಕ್ಷಣಗಳಿವೆ. ಇದಕ್ಕೆ ಜನರ ಬಳಿ ಹಣವಿಲ್ಲದಿರುವುದೇ ಕಾರಣ ಎಂದು ನೀವು ಯೋಚಿಸಿದ್ದರೆ ಅದು ತಪ್ಪು. ಮಳಿಗೆಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ದಾಸ್ತಾನು ಬೇಡಿಕೆಗೆ ತಕ್ಕಂತೆ ಇಲ್ಲ. ಹೀಗಾಗಿ ಜನ ಹಬ್ಬದ ಖರೀದಿಗೆ ಮುಂದಾದರೂ ಆ ಬೇಡಿಕೆ ಪೂರೈಸುವ ಸ್ಥಿತಿಯಲ್ಲಿ ವ್ಯಾಪಾರಸ್ಥರಿಲ್ಲ.

ಚಿಪ್ ಕೊರತೆಯಲ್ಲಿ ಜಗತ್ತು

ಅದು ಸ್ಮಾರ್ಟ್ ಫೋನ್ ಇದ್ದಿರಬಹುದು, ಸ್ಮಾರ್ಟ್ ಟಿವಿ ಆಗಿದ್ದಿರಬಹುದು ಇವತ್ತಿನ ಎಲ್ಲ ಬಗೆಯ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಕೆಯಾಗುವುದು ಚಿಪ್ ಇಲ್ಲವೇ ಸೆಮಿಕಂಡಕ್ಟರ್. ಲ್ಯಾಪ್ಟಾಪ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಮಾಹಿತಿ ಸಂಸ್ಕರಿಸುವ ಮೂಲ ನಿರ್ಮಿತಿ ಘಟಕಗಳು ಈ ಸೆಮಿಕಂಡಕ್ಟರ್.

ಸದ್ಯಕ್ಕೆ ಇಡೀ ಜಗತ್ತೇ ಸೆಮಿಕಂಡಕ್ಟರ್/ಚಿಪ್ ಗಳ ಕೊರತೆಯನ್ನು ಎದುರಿಸುತ್ತಿದೆ. ಇದು ಅಟೊಮೊಬೈಲ್ ಸೇರಿದಂತೆ ಹಲವು ಉದ್ಯಮಗಳನ್ನು ನಿಧಾನವಾಗುವಂತೆ ಮಾಡಿದೆ. ಕೋವಿಡ್ ಕಾರಣದಿಂದ ಚಿಪ್ ಉತ್ಪಾದನೆ ಕುಂಠಿತಗೊಂಡಿತ್ತು. ಆದರೆ ಅದೊಂದೇ ಕಾರಣವಾಗಿದ್ದರೆ ಇಷ್ಟೊತ್ತಿಗೆಲ್ಲ ಪರಿಸ್ಥಿತಿ ಬಹುತೇಕ ಸುಧಾರಿಸಿಬಿಡುತ್ತಿತ್ತು. ಟೆಕ್ಸಾಸಿನಲ್ಲಿ ಇತ್ತೀಚೆಗೆ ಚಳಿಗಾಲದ ತೀವ್ರತೆ ಹೆಚ್ಚಾಗಿ ಸೆಮಿಕಂಡಕ್ಟರ್ ಕಾರ್ಖಾನೆಗಳನ್ನು ದೀರ್ಘ ಅವಧಿಗೆ ಮುಚ್ಚಬೇಕಾಗಿ ಬಂತು. ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ತೈವಾನಿನಲ್ಲಿ ನೀರಿನ ಕೊರತೆಯಾಗಿ ಚಿಪ್ ತಯಾರಿಕೆಗೆ ಹಿನ್ನಡೆಯಾಯಿತು. ಜಪಾನ್ ಕಾರ್ಖಾನೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಸೆಮಿಕಂಡಕ್ಟರ್ ಉತ್ಪಾದನೆ ಕುಂಠಿತವಾಯಿತು. ಹೀಗೆ ಹಲವು ಕಾರಣಗಳು ಸೇರಿಕೊಂಡು ಮಂಕಾಗಿರುವ ಚಿಪ್ ಉತ್ಪಾದನಾ ಸಾಮರ್ಥ್ಯ ಸರಿದಾರಿಗೆ ಬರುವುದಕ್ಕೆ ಇನ್ನೆರಡು ವರ್ಷಗಳೇ ಹಿಡಿದಾವು ಅಂತ ಇಂಟೆಲ್ ಮತ್ತು ಐಬಿಎಂ ಭವಿಷ್ಯ ಹೇಳಿವೆ. 

ಹೀಗಾಗಿ, ದೀಪಾವಳಿ ಮತ್ತು ದಸರಾಗಳಲ್ಲಿ ಟಿವಿ, ಲ್ಯಾಪ್ಟಾಪ್, ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ಗಳಿಗೆ ರಿಯಾಯತಿ ಘೋಷಿಸಿ ಮಾರುವ ಜಾಹೀರಾತುಗಳು ಈ ಬಾರಿ ನಿಮಗೆ ಅಷ್ಟಾಗಿ ಕಾಣಲಿಕ್ಕಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss