ಹೊಸದಿಗಂತ ಆನ್ ಲೈನ್ ಡೆಸ್ಕ್:
ಸ್ಮೃತಿ ಮಂದಣ ಮತ್ತು ಪೂನಂ ರಾವತ್ ಅವರ ಅರ್ಧ ಶತಕಗಳ ನೆರವಿನಿಂದ ಭಾರತೀಯ ವನಿತೆಯರು ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟುಗಳಿಂದ ಸೋಲಿಸಿದರು. ಇದರೊಂದಿಗೆ ಸರಣಿಯು ಸಮಬಲಗೊಂಡಿದೆ. ಮೊದಲ ಏಕದಿನ ಪಂದ್ಯವನ್ನು ದ.ಆಫ್ರಿಕಾ ವನಿತೆಯರು ಗೆದ್ದುಕೊಂಡಿದ್ದರು.
ಭಾರತದ ಮಂಗಳವಾರದ ಗೆಲುವಿನಲ್ಲಿ ಬೌಲರುಗಳೂ ಪ್ರಮುಖ ಪಾತ್ರ ವಹಿಸಿದರು. ಮೊದಲು ಬ್ಯಾಟಿಂಗಿಗೆ ಇಳಿದ ವ.ಆಫ್ರಿಕಾವನ್ನು ಕೇವಲ 157 ರನ್ಗಳಿಗೆ ನಿಯಂತ್ರಿಸಲು ಸಫಲರಾದರು. ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ 42 ರನ್ಗಳಿಗೆ 4ವಿಕೆಟ್ ಕಿತ್ತು ದ.ಆಫ್ರಿಕಾದ ಪತನಕ್ಕೆ ಕಾರಣರಾದರು. ರಾಜೇಶ್ವರಿ ಗಾಯಕವಾಡ್ 3 ವಿಕೆಟ್ ಕಿತ್ತರೆ, ಮನ್ಶಿ ಜೋಶಿ ಎರಡು ವಿಕೆಟ್ ಪಡೆದರು. ದ.ಆಫ್ರಿಕಾ ಪರವಾಗಿ ಲಾರಾ ಗುಡಾಲ್ 49 ರನ್ ಬಾರಿಸಿದ್ದು ಬಿಟ್ಟರೆ ಇತರರಿಂದ ಗಮನಾರ್ಹ ಕೊಡುಗೆ ಬರಲಿಲ್ಲ.
ಭಾರತವು ಜೆಮಿಮಾ ರೋಡ್ರಿಗಸ್ ವಿಕೆಟನ್ನು ಬೇಗನೆ ಕಳಕೊಂಡರೂ ಬಳಿಕ ಮಂದಣ ಮತ್ತು ರಾವತ್ ಅವರುಗಳು ಯಾವುದೇ ವಿಕೆಟ್ ಕಳಕೊಳ್ಳದೆ ತಂಡವು ಗೆಲುವು ಸಾಧಿಸುವಂತೆ ನೋಡಿಕೊಂಡರು. 28.4 ಓವರುಗಳಲ್ಲೆ ತಂಡವು ಗೆಲುವು ಸಾಧಿಸಿತು.
ಸ್ಮೃತಿ ಮಂದಣ 64 ಎಸೆತಗಳಿಂದ ಅಜೇಯ 80 ರನ್ ಗಳಿಸಿದರೆ, ಪೂನಂ ರಾವತ್ 89 ಎಸೆತಗಳಿಂದ 62 ರನ್ ಗಳಿಸಿ ಔಟಾಗದೆ ಉಳಿದರು.
ಸರಣಿಯಲ್ಲಿ ಇನ್ನೂ ಮೂರು ಏಕದಿನ ಪಂದ್ಯಗಳು ಬಾಕಿಯುಳಿದಿವೆ.
ಸಂಕ್ಷಿಪ್ತ ಸ್ಕೋರು: ದ.ಆಫ್ರಿಕಾ ವನಿತೆಯರು 41 ಓವರುಗಳಲ್ಲಿ ಆಲೌಟ್ 157 (ಲಾರಾ ಗುಡಾಲ್ 49, ಸೂನ್ ಲೂಸ್ 36. ಜೂಲನ್ ಗೋಸ್ವಾಮಿ 42ಕ್ಕೆ 4, ರಾಜೇಶ್ವರಿ 37ಕ್ಕೆ 3, ಮನ್ಶಿ ಜೋಶಿ 23ಕ್ಕೆ 2 ವಿಕೆಟ್)
ಭಾರತ ವನಿತೆಯರು 28.4 ಓವರುಗಳಲ್ಲಿ 1 ವಿಕೆಟಿಗೆ160 (ಸ್ಮೃತಿ ಮಂದಣ ಔಟಾಗದೆ 80, ಪೂನಂ ರಾವತ್ ಓಟಾಗದೆ 62 )