ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ಹಾಗೂ ಭಾರತ ಮಹಿಳಾ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ತಮ್ಮ ಏಕದಿನ ವೃತ್ತಿಜೀವನದ 8ನೇ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದಿರುವುದಲ್ಲದೆ, ಸರಣಿಯನ್ನು 2-1 ರಿಂದ ಗೆಲ್ಲಲು ಸಹಾಯ ಮಾಡಿದೆ.
73 ಎಸೆತಗಳಲ್ಲಿ 4 ಬೌಂಡರಿ ಸಹಿತ ಅರ್ಧಶತಕ ಪೂರೈಸಿದ್ದ ಮಂಧಾನ, ಅರ್ಧಶತಕ ಪೂರೈಸಿದ ನಂತರ, 121 ಎಸೆತಗಳಲ್ಲಿ 6 ಬೌಂಡರಿ ಸಹಿತ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸುವ ಮೂಲಕ ಸ್ಮೃತಿ ಮಂಧಾನ ದೊಡ್ಡ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ಶತಕ ಸಿಡಿಸಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಮಂಧಾನ ಪಾತ್ರರಾಗಿದ್ದಾರೆ.
ಶತಕದ ಇನ್ನಿಂಗ್ಸ್ ಜೊತೆಗೆ ಮಂಧಾನ, ನಾಯಕಿ ಹರ್ಮನ್ಪ್ರೀತ್ ಕೌರ್ ಜೊತೆ ಅತ್ಯುತ್ತಮ ಜೊತೆಯಾಟವನ್ನು ಕೂಡ ಮಾಡಿದರು. ಮಂಧಾನ ಮತ್ತು ಹರ್ಮನ್ಪ್ರೀತ್ ಕೌರ್ ನಡುವೆ 116 ಎಸೆತಗಳಲ್ಲಿ 118 ರನ್ಗಳ ಜೊತೆಯಾಟವಿತ್ತು. ಈ ಜೊತೆಯಾಟದ ಆಧಾರದಲ್ಲಿ ಟೀಂ ಇಂಡಿಯಾ ಈ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಪೂರ್ಣ 50 ಓವರ್ಗಳನ್ನು ಆಡದೆ 49.3 ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ 233 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶೆಫಾಲಿ ವರ್ಮಾ ಬೇಗನೇ ಔಟಾದರು. ಇದಾದ ಬಳಿಕ ಮಂಧಾನ, ಯಾಸ್ತಿಕಾ ಭಾಟಿಯಾ ಅವರೊಂದಿಗೆ 104 ಎಸೆತಗಳಲ್ಲಿ 76 ರನ್ ಸೇರಿಸಿದರು. ಭಾಟಿಯಾ ಔಟಾದ ನಂತರ ನಾಯಕಿ ಹರ್ಮನ್ಪ್ರೀತ್ ಕೌರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪರವಾಗಿ ತಿರುಗಿಸಿದರು. ಹರ್ಮನ್ಪ್ರೀತ್ ಕೇವಲ 54 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗಿ ಪೆವಿಲಿಯನ್ಗೆ ಮರಳುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.