ʼಕೋವಿಡ್ ಶೂನ್ಯ ಸಹನೆʼ ನೀತಿಯಡಿ ಚೀನಾದಲ್ಲಿ ಭೀಕರ ಹಿಂಸಾಚಾರ; ಜೈಲಿನಂತಾ ಕ್ಯಾಂಪ್‌ ಗಳಲ್ಲಿ ಪ್ರಜೆಗಳ ಆರ್ತನಾದ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಚೀನಾ ದೇಶದಲ್ಲಿ ಕೊರೋನಾರ್ಭಟ ತಾರಕಕ್ಕೇರಿದೆ. ಚೀನಾದ ಹಲವು ಪ್ರಮುಖ ನಗರಗಳಲ್ಲಿ ಲಾಕ್‌ಡೌನ್ ಹಾಗೂ ಸೀಲ್‌ ಡೌನ್ ಹೇರಲಾಗಿದೆ. ಈ ನಡುವೆ ಕೋವಿಡ್ ನಿಯಂತ್ರಣಕ್ಕೆ ಚೀನಾ ‘ಶೂನ್ಯ ಸಹನೆ’ ನೀತಿಯನ್ನು ಹೇರಿ ಜನರನ್ನು ಪಶುಗಳಂತೆ ನಡೆಸಿಕೊಳ್ಳುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿ ವೈರಲ್‌ ಆಗುತ್ತಿದೆ.
ಕೊರೋನಾ ಪ್ರಕರಣಗಳು ಹೆಚ್ಚಿರುವ ಶಾಂಘೈ ನಗರದ ನಿವಾಸಿಗಳನ್ನು ಚೀನಾ ಸರ್ಕಾರ ಅಕ್ಷರಶಃ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದೆ. ಅವರ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಚೀನಾವು ಕೊರೋನಾ ಹತ್ತಿಕ್ಕುವ ಹೆಸರಿನಲ್ಲಿ ಕಮ್ಯೂನಿಷ್ಟ್‌ ಪರದೆಗಳಡಿ ನಡೆಸುತ್ತಿರುವ ನಾಗರಿಕರ ಮೇಲೆ ನಡೆಸುತ್ತಿರುವ ಚಿತ್ರಹಿಂಸೆ, ವಿನಾಕಾರಣ ನಿಂದನೆ, ಹಿಂಸಾಕೃತ್ಯಗಳ ಬೀಕರತೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಸೋರಿಕೆಯಾದ ವಿಡಿಯೋಗಳು ತೆರೆದಿಡುತ್ತಿವೆ. ಚೀನಾದಲ್ಲಿ ಮಾನವಹಕ್ಕುಗಳ ಘೋರ ಉಲ್ಲಂಘನೆಯಾಗುತ್ತಿರುವುದನ್ನು ಈ ವಿಡಿಯೊಗಳು ದೃಢೀಕರಿಸುತ್ತವೆ.
ಈ ಸೋರಿಕೆಯಾದ ವಿಡಿಯೋಗಳಲ್ಲಿ ಚೀನೀ ಅಧ್ಯಕ್ಷ ಕ್ಷಿ ಜಿಂಗ್‌ ಪಿಂಗ್‌ ನೇಮಿಸಿರುವ ಆರೋಗ್ಯ ಅಧಿಕಾರಿಗಳ ಪಡೆ ಚಿಕಿತ್ಸೆ ಹೆಸರಿನಲ್ಲಿ ಜನರಿಗೆ ಹೊಡೆಯುತ್ತಿರುವುದು, ಮನೆಗಳಿಂದ  ಬಲವಂತವಾಗಿ  ಎಳೆದೊಯ್ಯುತ್ತಿರುವುದು, ಮನೆಯಿಂದ ಹೊರಬರದಂತೆ ಬಾಗಿಲುಗಳನ್ನು ವೆಲ್ಡ್‌ ಮಾಡಿ ಮುಚ್ಚುತ್ತಿರುವುದು, ಜೈಲಿನಂತಹ ಕಿಟಕಿಗಳಿರುವ ಕೋಣೆಗಳಿಗೆ ಅಟ್ಟಿ ಬೀಗ ಜಡಿದಿರುವುದು, ಸಾವಿರಾರು ಜನರನ್ನು ಅಮಾನವೀಯವಾಗಿ ಕ್ವಾರಂಟೈನ್‌ ಕ್ಯಾಂಪ್‌ ಗೆ ಎಳೆದೊಯ್ಯುತ್ತಿರುವುದು ಚೀನಾದ ಕರಾಳ ‘ಶೂನ್ಯ ಸಹನೆ ನೀತಿಯ ಭೀಕರತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.

ಚೀನಾ ಅನುಸರಿಸುತ್ತಿರುವ ನೀತಿಗಳು ಜನರ ಉಸಿರುಗಟ್ಟಿಸುತ್ತಿವೆ. ಶಾಂಘೈ ನಗರದಲ್ಲಿ ಪುರುಷ- ಮಹಿಳೆ, ಮಕ್ಕಳು- ವೃದ್ಧ ಎಂಬುದನ್ನು ನೋಡದೆ ಒಂದು ಕೋಣೆಯಳಗೆ ತಳ್ಳಿ ಬಾಗಿಲು ಜಡಿಯಲಾಗುತ್ತಿದೆ. ಸರಿಯಾದ ಆಹಾರ, ಅಗತ್ಯವಸ್ತುಗಳು ಸಿಗದೆ ಜನರು ಈ ಕ್ಯಾಂಪ್‌ ಗಳಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ. ಜನರ ಇಚ್ಛೆಗೆ ವಿರುದ್ಧವಾಗಿ ಈ ಕ್ಯಾಂಪ್‌ ಗಳಲ್ಲಿ ಅವರನ್ನು ಬಂಧಿಸಿಡಲಾಗಿದೆ. ಕೊರೋನಾ ಹತ್ತಿಕ್ಕುವ ಹೆಸರಿನಲ್ಲಿ ಚೀನಾ ಕ್ರೂರ ನಡವಳಿಕೆಗಳನ್ನು ತೋರುವ ಮೂಲಕ ಜನರ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಕಿತ್ತುಕೊಂಡಿದೆ. ಇಂತಹ ಪರಿಪರಿಸ್ಥಿತಿ ಕೇವಲ ಶಾಂಘೈನಲ್ಲಿ ಮಾತ್ರವಲ್ಲ, ಚೀನಾದ ಬಹುತೇಕ ನಗರಗಳಲ್ಲಿ ಇಂತಹದ್ದೇ ದೌರ್ಜನ್ಯಗಳು ನಡೆಯುತ್ತಿವೆ ಎಂಬುದು ವಿಡಿಯೋಗಳು ಬಿಚ್ಚಿಡುತ್ತಿವೆ.
ತಮ್ಮ ಮೇಲಿನ ದೌರ್ಜನ್ಯಗಳಿಂದ ಹತಾಶರಾಗಿರುವ ಜನರು ಶೂನ್ಯಕೋವಿಡ್‌ ನೀತಿಯನ್ನು ಪ್ರತಿಭಟಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತೀವ್ರ ಪ್ರತಿಭಟನೆ ನಡೆಸುತ್ತಿರುವುದನ್ನು ವಾಯ್ಸ್‌ ಆಫ್‌ ಏಪ್ರಿಲ್‌ ಎಂಬ ವಿಡಿಯೋ ತೆರೆದಿಡುತ್ತದೆ. ಶಾಂಘೈ ಮೂಲದ ಸಂಗೀತರಾರ ಅಸ್ಟ್ರೋ ಎಂಬುವವರು ʼಹೊಸ ಗುಲಾಮರುʼ ಎಂಬ ಹಾಡು ಬಿಡುಗಡೆ ಮಾಡಿದ್ದು, ತನ್ನದೇ ನಾಗರೀಕರ ಮೇಲೆ ಚೀನಾ ನಡೆಸುತ್ತಿರುವ ಹಿಂಸಾಚಾರ, ಅವರ ಜೀವನವನ್ನು ತುಚ್ಛವಾಗಿ ಕಾಣುವ ಕಮ್ಯೂನಿಸ್ಟ್‌ ಸರ್ಕಾರದ ಕ್ರೂರತೆಯನ್ನು ತೆರೆದಿಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!