ಯೋಧನ ಕುಟುಂಬಕ್ಕೇ ಸಾಮಾಜಿಕ ಬಹಿಷ್ಕಾರ: ಜಿಲ್ಲಾಧಿಕಾರಿಗೆ ದೂರು

ಹೊಸ ದಿಗಂತ ವರದಿ, ಮಡಿಕೇರಿ:

ಯೋಧನ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ದೂರು ಕೇಳಿ ಬಂದಿದ್ದು, ಈ ಬಗ್ಗೆ ಬಹಿಷ್ಕಾರಕ್ಕೊಳಗಾಗಿರುವ ಕುಟುಂಬ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.
ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿ ಗ್ರಾಮದ ಅಬ್ಬಿಮಠ ಬಾಚಳ್ಳಿ(ಚಿಗಟಳ್ಳಿ)ಯ ಎಸ್.ಬಿ.ಶಾಂತಪ್ಪ ಎಂಬವರೇ ಕುಟುಂಬವೇ ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಕುಟುಂಬವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಶಾಂತಪ್ಪ ಅವರು, ದೇಶ ರಕ್ಷಕನ ತಂದೆ, ತಾಯಿಗಳಿಗೇ ರಕ್ಷಣೆ ಇಲ್ಲದಾಗಿದೆ ಎಂದು ಅವಲತ್ತುಕೊಂಡಿದ್ದಾರೆ.
ತಲ್ತರೆಶೆಟ್ಟಳ್ಳಿ ಗ್ರಾಮದ ವಿವೇಕ ವಿವಿಧ ಅಭಿವೃದ್ಧಿ ಸಮಿತಿಯ 2018ರ ಸಭೆಗೆ ಹಾಜರಾಗಲಿಲ್ಲವೆಂಬ ಕಾರಣ ನೀಡಿ ಸಮಿತಿಯ ಸುಚನೆಯಂತೆ ಎಲ್ಲಾ ವಿಧದಲ್ಲೂ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ನಮ್ಮ ಮನೆಗೆ ಯಾರೂ ಬರುವಂತಿಲ್ಲ ಮತ್ತು ನಾವು ಯಾರ ಮನೆಗೂ ಹೋಗುವಂತಿಲ್ಲ ಎನ್ನುವ ಅಪ್ಪಣೆ ಮಾಡಲಾಗಿದೆ. ತಾನು ಕೃಷಿಕನಾಗಿದ್ದು, ನಮ್ಮ ಜಮೀನಿಗೆ ಕೃಷಿ ಕೆಲಸಕ್ಕೆ ಬರಲು ಯಾರನ್ನೂ ಬಿಡುತ್ತಿಲ್ಲ ಇದರಿಂದಾಗಿ ತಮ್ಮ‌ ಕುಟುಂಬ ಮಾನಸಿಕವಾಗಿ ತೀವ್ರವಾಗಿ ನೊಂದಿರುವುದಾಗಿ ಶಾಂತಪ್ಪ ಅವರು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ತಮ್ಮ ಹೊಸ ಮನೆಯ ಗೃಹ ಪ್ರವೇಶವಾಗಿದ್ದು, ಈ ಕಾರ್ಯಕ್ರಮಕ್ಕೆ ಊರಿನವರನ್ನು ಆಹ್ವಾನಿಸಲಾಗಿತ್ತು. ಆದರೆ ಸಾಮಾಜಿಕ ಬಹಿಷ್ಕಾರದ ಹಿನ್ನೆಲೆಯಲ್ಲಿ ಕೇವಲ 10 ಹೊರತಾಗಿ ಉಳಿದವರು ಯಾರೂ ಗೃಹ ಪ್ರವೇಶಕ್ಕೆ ಬಂದಿಲ್ಲ. ಗೃಹ ಪ್ರವೇಶಕ್ಕೆ ಬಂದ 10 ಮಂದಿಯ ಪೈಕಿ 3 ಮಂದಿಗೆ ತಲಾ 5 ಸಾವಿರ ದಂಡವನ್ನೂ ವಿಧಿಸಲಾಗಿದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ಈ ಬೆಳವಣಿಗೆ ಕಳೆದ ನಾಲ್ಕು ವರ್ಷಗಳಿಂದ ಕುಟುಂಬವನ್ನು ಮಾನಸಿಕವಾಗಿ ಕುಗ್ಗಿಸಿದ್ದಲ್ಲದೆ ಭೀತಿಯನ್ನೂ ಮೂಡಿಸಿದೆ. ಸಾಮಾಜಿಕ ಬಹಿಷ್ಕಾರದ ಬಗ್ಗೆ ಕಳೆದ ಡಿಸೆಂಬರ್’ನಲ್ಲಿ ಕೊಡಗು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಸೋಮವಾರಪೇಟೆ ತಹಶೀಲ್ದಾರ್ ಹಾಗೂ ಸೋಮವಾರಪೇಟೆ ಪೊಲೀಸರಿಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಇಲ್ಲಿಯವರೆಗೆ ನ್ಯಾಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೆ ಸೋಮವಾರಪೇಟೆ ಪೊಲೀಸರಿಗೆ ವರ್ಗಾಯಿಸಿ ಇತ್ಯರ್ಥ ಪಡಿಸುವಂತೆ ಸೂಚಿಸುತ್ತಾರೆ. ಆದರೆ ಸೋಮವಾರಪೇಟೆ ಪೊಲೀಸರು ತನ್ನನ್ನು ಠಾಣೆಗೆ ಕರೆಸಿಕೊಂಡು ನನ್ನ ವಿರುದ್ಧವೇ ಮಾತನಾಡುತ್ತಾರೆ ಹೊರತು ಬಹಿಷ್ಕಾರ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳೇ ಈ ಪ್ರಕರಣವನ್ನು ಗಂಭೀರವಾಗಿ ಎಲ್ಲಾ ಊರಿನವರಂತೆ ನಮಗೂ ಊರಿನಲ್ಲಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕು.ಅಲ್ಲದೆ ಮುಂದಿನ ದಿನಗಳಲ್ಲಿ ಯಾರಿಗೂ ಈ ರೀತಿಯ ಬಹಿಷ್ಕಾರಗಳು ಆಗದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಾಂತಪ್ಪ ಅವರು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!