ಯೋಧ, ವೈದ್ಯ, ನಾಸಾ ಗಗನಯಾನಿ: ಈ ವ್ಯಕ್ತಿಯ ಸಾಧನಾಗಾಥೆ ನಿಮ್ಮ ಆಲಸ್ಯವನ್ನು ಹೊಡೆದೋಡಿಸುತ್ತೆ!

0
415

ಹೊಸದಿಗಂತ ಆನ್ ಲೈನ್ ಡೆಸ್ಕ್:

ಶಾಲೆಗೆ ಹೋಗುವ ವಯಸ್ಸಿನಲ್ಲಿ ಪ್ರತಿಯೊಬ್ಬರೂ ಡಾಕ್ಟರ್, ಎಂಜಿನೀಯರ್, ಪೈಲೆಟ್ ಹಿಂಗೆಲ್ಲಾ ಆಗಬೇಕೆಂದು ಕನಸು ಕಾಣುತ್ತೇವೆ. ಇವುಗಳಲ್ಲಿ ಯಾವೊಂದು ಕನಸನ್ನು ಈಡೇರಿಸಿಕೊಳ್ಳುವುದಕ್ಕೇ ಇಡೀ ಜೀವನ ಬೇಕಾಗುತ್ತದೆ.
ಆದರೆ, ಕೊರಿಯನ್ ಮೂಲದ ಅಮೆರಿಕ ಪ್ರಜೆ ಜಾನಿ ಕಿಮ್ ಇವೆಲ್ಲವನ್ನೂ ಸಾಧ್ಯವಾಗಿಸಿಕೊಂಡು, ಸಾಧನೆಯ ಹಾದಿಯಲ್ಲಿ ಯಾವುದೂ ಅಸಾಧ್ಯವಲ್ಲ ಎಂಬ ಸಂದೇಶ ಸಾರಿದ್ದಾರೆ.
ಡಾ. ಜಾನಿ ಕಿಮ್ ಅವರ ತಂದೆ-ತಾಯಿ ಮೂಲತ: ಕೊರಿಯಾದವರಾಗಿದ್ದು, ಅಮೆರಿಕದಲ್ಲಿ ಜೀವನ ನಡೆಸುತ್ತಿದ್ದರು.
ಶಾಲಾ ವಿದ್ಯಾರ್ಥಿಯಾಗಿದ್ದ ಜಾನಿ ಕಿಮ್ ಒಂಥರ ಅಂತರ್ಮುಖಿಯಾಗಿದ್ದ. ಯಾರೊಂದಿಗೆ ಬೆರೆಯುವುದಕ್ಕೂ ಹಿಂಜರಿಕೆ. ಒಬ್ಬನೇ ಹೋಟೆಲ್ ಗೆ ಹೋಗೋದಕ್ಕೂ ಮುಜುಗರ.
ಹೀಗೆಲ್ಲಾ ಆಗಿದ್ದು ಅವರ 16ನೇ ವಯಸ್ಸಿನಲ್ಲಿ, ಅದೂ ಕಾಲೇಜು ಮೆಟ್ಟಿಲು ಹತ್ತುವ ವಯಸ್ಸು, ಆತ್ಮ ವಿಶ್ವಾಸವೇ ಇಲ್ಲದ ವ್ಯಕ್ತಿ ಕಾಲೇಜು ಸೇರೋದು ಬಿಟ್ಟು ನೇರವಾಗಿ ಹೋಗಿದ್ದು ಅಮೆರಿಕದ ನೌಕಾ ಪಡೆಗೆ ಅಂದರೆ ಖಂಡಿತ ಆಶ್ಚರ್ಯ ಆಗುತ್ತೆ ಅಲ್ವಾ?.
ನೌಕಾಪಡೆ ಕಿಮ್ ಅವರನ್ನು ಆಕರ್ಷಿಸಿತ್ತು. ಹೀಗಾಗಿ ಅದರ ಪರೀಕ್ಷೆ ಬರೆದರು. ಆಯ್ಕೆಯೂ ಆದರು. ಕೊರೊನಾಡೊದಲ್ಲಿ ನೌಕಾ ಪಡೆಯ ವಿಶೇಷ ಯುದ್ಧದಲ್ಲಿ ತರಬೇತಿ ಪಡೆದು, ನೌಕಾಪಡೆಯ ಸೀಲ್ ತಂಡಕ್ಕೆ ಆಯ್ಕೆಯಾದರು.
ಅಮೆರಿಕ ಸೇನೆಯಲ್ಲಿ ಸೀಲ್ ಅಂದರೆ, ಈ ತಂಡದ ಸೈನಿಕರು ಕೇವಲ ಒಂದು ವಿಭಾಗಕ್ಕೆ ಸೀಮಿತವಾಗದೆ ವಾಯು ಸೇನೆ, ಗಡಿ, ನೌಕಾ ಪಡೆ ಸೇರಿದಂತೆ ಆಲ್ ರೌಂಡರ್ ನಂತೆ ಕೆಲಸ ಮಾಡಬೇಕು. ಕಠಿಣ ವಿಶೇಷ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡಬೇಕು.
ಈ ಸೀಲ್ ತಂಡದಲ್ಲಿದ್ದು 100 ಯುದ್ಧ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸುವಲ್ಲಿ ಕಿಮ್ ಯಶಸ್ವಿಯಾಗಿದ್ದಾರೆ. ವಿಶೇಷ ಕಾರ್ಯಾಚರಣೆ, ಯುದ್ಧಭೂಮಿಯಲ್ಲಿ ಔಷಧಿ ಪೂರೈಕೆ, ದೂರದ ಗುರಿಯನ್ನು ನಿಖರ ಹೊಡೆತದಲ್ಲಿ ಕೊಲ್ಲುವ ಸ್ನೈಪರ್, ಅಪರಿಚಿತ ಪ್ರದೇಶದಲ್ಲಿ ದಾರಿತೋರಿಸುವ ನಾಯಕತ್ವ ಇತ್ಯಾದಿಗಳಲ್ಲಿ ಪಾತ್ರ ನಿಭಾಯಿಸಿ ಹಲವು ಶೌರ್ಯ ಪದಕಗಳನ್ನೂ ಗೆದ್ದರು.
ಶಾಲೆ ಮುಗಿಯುತ್ತಲೇ ಮೇಲೆ ಸೇನೆಯತ್ತ ಮುಖಮಾಡಿದ್ದ ಕಿಮ್ 2012ರಲ್ಲಿ ಮತ್ತೆ ವಾಪಾಸ್ ಆಗಿ ಡಿಯಾಗೋ ವಿಶ್ವವಿದ್ಯಾಲಯದಲ್ಲಿ ಗಣಿತ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.
ಸೇನೆಯಲ್ಲಿ ಕೆಲಸ ಮಾಡಿದ ಕಿಮ್ ಗೆ ತನ್ನ ಸಹ ಕಮಾಂಡರ್ ಗಳ ಗಾಯ ಹಾಗೂ ನರಳಾಟಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅವರ ನೋವು ಗುಣಪಡಿಸೋಕೆ ತಾನು ನೆರವಾಗಬೇಕೆಂಬ ಮಹದಾಸೆ ಹೊಂದಿದ್ದರು. ಇದೇ 2016ರಲ್ಲಿ ಹಾರ್ವರ್ಡ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದು ಡಾಕ್ಟರ್ ಆಗುವುದಕ್ಕೆ ಪ್ರೇರೇಪಿಸಿತು.
ಇಲ್ಲಿಗೆ ನಿಲ್ಲಲಿಲ್ಲ ಕಿಮ್ ನ ಸಾಧನೆ. ಆಕಾಶದಲ್ಲಿನ ತಾರೆಗಳನ್ನು ನೋಡುವ ಕನಸು ಕಂಡರು. ಗಗನಯಾತ್ರಿಯಾಗಲು ನಾಸಾಗೆ ಅರ್ಜಿಸಲ್ಲಿಸಿ ಆಯ್ಕೆಯಾಗಿಯೇ ಬಿಟ್ಟರು. ಇವರೀಗ ನಾಸಾದ ಮೊದಲ ಕೊರಿಯನ್- ಅಮೆರಿಕನ್ ಗಗನಯಾತ್ರಿ.
ಚಂದ್ರನ ತಲುಪುವ ಅಮೆರಿಕದ ಕನಸಿಗೆ ಕಿಮ್ ಕೂಡ ಒಬ್ಬರಾಗಿದ್ದು, 2024ರಲ್ಲಿ ಆರಂಭವಾಗುವ ಚಂದ್ರನ ಆರ್ಟಿಮಿಸ್ ತಂಡದಲ್ಲಿ ಇವರೂ ಇದ್ದಾರೆ.
ಒಂದು ಕಾಲದಲ್ಲಿ ಶಾಲೆಯಲ್ಲಿ ಒಂಟಿಯಾಗಿದ್ದ ಅಂತರ್ಮುಖಿ ವ್ಯಕ್ತಿ ಈಗ ನೌಕಾಪಡೆಯ ಸೀಲ್, ಹಾರ್ವರ್ಡ್ ನಿಂದ ಉತ್ತೀರ್ಣನಾದ ವೈದ್ಯ ಹಾಗೂ ನಾಸಾದ ಗಗನಯಾತ್ರಿಯಾಗಿಯೂ ನಮ್ಮ ಕಣ್ಣಮುಂದೆ ಇದ್ದಾರೆ.
ಇವರ ಸಾಧನೆ, ಯಶಸ್ಸು ಯುವಪೀಳಿಗೆಗೆ ಸದಾ ಸ್ಪೂರ್ತಿಯಾಗಿರಲಿದೆ.

LEAVE A REPLY

Please enter your comment!
Please enter your name here