Friday, July 1, 2022

Latest Posts

ಶೀಘ್ರದಲ್ಲೇ ಮೈಶುಗರ್, ಶ್ರೀರಾಮ ಸಕ್ಕರೆ ಕಾರ್ಖಾನೆಗಳು ಪ್ರಾರಂಭ: ಮುಖ್ಯಮಂತ್ರಿ ಬೊಮ್ಮಾಯಿ

ಹೊಸ ದಿಗಂತ ವರದಿ, ಮೈಸೂರು:

ಮಂಡ್ಯ ಜಿಲ್ಲೆಯಲ್ಲಿರುವ ಮೈಶುಗರ್ ಹಾಗೂ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನಲ್ಲಿರುವ ಶ್ರೀರಾಮ ಸಕ್ಕರೆ ಕಾರ್ಖಾನೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಮೈಸೂರಿನ ಕಲಾಮಂದಿರದಲ್ಲಿ ಇಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆಯ ರಾಜ್ಯಮಟ್ಟದ ಸಮಾವೇಶ ಹಾಗೂ ಕುರುಬೂರು ಶಾಂತಕುಮಾರ ಅವರಿಗೆ 40 ವರ್ಷಗಳ ಹೋರಾಟಕ್ಕೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಶುಗರ್ ಕಾರ್ಖಾನೆಯನ್ನು ಪ್ರಾರಂಭಿಸುವ ಸಂಬAಧ ಈಗಾಗಲೇ ರೈತರು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ. ಕಾರ್ಖಾನೆಯನ್ನು ಪ್ರಾರಂಭಿಸಲು ಸೂಕ್ತ ಕ್ರಮವಹಿಸಲಾಗಿದೆ. ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಕಂಪನಿಯವರು ಕೊಂಡು ಕೊಂಡಿದ್ದು, ಕಾರ್ಖಾನೆ ಪ್ರಾರಂಭಿಸುವುದಕ್ಕೆ ತಾಂತ್ರಿಕ ಅಡಚಣೆಗಳಿವೆ. ಈ ಬಗ್ಗೆಯೂ ಆ ಕಂಪನಿಯ ಅಧಿಕಾರಿಗಳು, ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಡಚಣೆಯನ್ನು ನಿವಾರಿಸಿ, ಕಾರ್ಖಾನೆಯನ್ನು ಶೀಘ್ರವಾಗಿ ಪ್ರಾರಂಭಿಸುವAತೆ ಸೂಚಿಸಲಾಗಿದೆ ಎಂದು ಹೇಳಿದರು.
ರೈತರ ಆದಾಯವನ್ನು ವೃದ್ಧಿಸುವ ಕುರಿತು ಕೃಷಿ ಮತ್ತು ಕಲ್ಯಾಣ ಇಲಾಖೆ, ರೈತರ ಆದಾಯ ದ್ವಿಗುಣ ಸಮಿತಿ ಮುಖ್ಯಸ್ಥರಾದ ಅಶೋಕ್ ದಳವಾಯಿ ಅವರು 3 ಸಾವಿರ ಪುಟದ ವರದಿ ನೀಡಿದ್ದಾರೆ. ಇದನ್ನು ಸಂಕ್ಷಿಪ್ತಗೊಳಿಸಿ, ಪರಿಶೀಲಿಸಿದ ಬಳಿಕ ರೈತರ ಆದಾಯ ದ್ವಿಗುಣಗೊಳ್ಳಲು ನಿರ್ದೇಶನಾಲಯವನ್ನು ನಮ್ಮ ಸರಕಾರ ಜಾರಿಗೊಳಿಸಲಿದೆ ಎಂದರು.
ರೈತರ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಅನುಕೂಲವಾಗಲೆಂಬ ಉದ್ದೇಶದಿಂದ `ವಿದ್ಯಾನಿಧಿ’ ಯೋಜನೆ ಜಾರಿಗೆ ತರಲಾಗಿದೆ. ಸದ್ಯ 2.40 ಲಕ್ಷ ರೈತರ ಮಕ್ಕಳಿಗೆ ಯೋಜನೆ ಲಾಭ ಸಿಗುತ್ತಿದೆ. ಮಾರ್ಚ್ ವೇಳೆಗೆ ಈ ಸಂಖ್ಯೆ 5 ಲಕ್ಷ ತಲುಪುವ ವಿಶ್ವಾಸವಿದೆ.
ರೈತರಿಗೆ ಸಾಲ ಸೌಲಭ್ಯ ನೀಡುವಲ್ಲಿಯೂ ಸಮಸ್ಯೆ ಉಂಟಾಗುತ್ತಿದೆ. ಒಂದು ಎಕರೆ ಇರುವವರಿಗೆ ಕಡಿಮೆ ಸಾಲ ಹಾಗೂ ಹೆಚ್ಚು ಎಕರೆ ಇರುವವರಿಗೆ ಹೆಚ್ಚು ಸಾಲ ಸಿಗುತ್ತದೆ. ಇದು ತಪ್ಪಬೇಕು. ಈ ಬಗ್ಗೆಯೂ ನಮ್ಮ ಸರಕಾರ ಗಮನ ಹರಿಸಿ ರೈತರಿಗೆ ಅನುಕೂಲವಾಗುವ ಕೆಲಸ ಮಾಡಲಿದೆ.
ರಾಜ್ಯದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಸದ್ಯ 12 ಲಕ್ಷಗಿಂತ ಹೆಚ್ಚು ಬೆಳೆ ನಾಶಗೊಂಡಿದೆ. ಮೊದಲೆಲ್ಲಾ 6 ತಿಂಗಳಾದರೂ ಬೆಳೆನಷ್ಟ ಅನುಭವಿಸಿದ ರೈತರಿಗೆ ಸಾಲ ಸಲವತ್ತು ಸಿಗುತ್ತಿರಲಿಲ್ಲ . ಇದೀಗ ಕೇವಲ ಒಂದು ತಿಂಗಳಲ್ಲಿ ಬೆಳೆಪರಿಹಾರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಾಕುವ ಮೂಲಕ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 800 ಕೋಟಿ ಪರಿಹಾರ ನೀಡಲಾಗಿದೆ. ಬರುವ ಮಾರ್ಚ್ ಅಂತ್ಯದ ವೇಳೆಗೆ ಎಲ್ಲಾ ಬೆಳೆ ನಷ್ಟ ಅನುಭವಿಸಿರುವ ಎಲ್ಲಾ ರೈತರಿಗೂ ಕೇಂದ್ರ ಸರ್ಕಾರ ನೀಡುವ ಪರಿಹಾರದೊಂದಿಗೆ ರಾಜ್ಯ ಸರ್ಕಾರದಿಂದಲೂ ದುಪ್ಪಟ್ಟು ಪರಿಹಾರವನ್ನು ಸೇರಿಸಿ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ಅವರ ಪತ್ನಿ ಪದ್ಮರನ್ನು ಸನ್ಮಾನಿಸಲಾಯಿತು. ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು. ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಕನ್ನಡ ಪ್ರಭ ಸಂಪಾದಕ ರವಿ ಹೆಗ್ದೆ ಸೇರಿದಂತೆ ಇತರರು ಇದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss