Wednesday, August 17, 2022

Latest Posts

ಶೀಘ್ರದಲ್ಲೇ ತಲೆ ಎತ್ತಲಿದೆ ನೆನೆಗುದಿಗೆ ಬಿದ್ದಿದ್ದ ಸಾಹಿತಿ ಅಂಬಳೆ ಕೃಷ್ಣಶಾಸ್ತ್ರಿ ಸ್ಮಾರಕ ಭವನ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಸಾಹಿತಿ ಅಂಬಳೆ ಕೃಷ್ಣಶಾಸ್ತ್ರಿ ಅವರ ಸ್ಮಾರಕ ಭವನ ನಿರ್ಮಾಣ ಕಾರ್ಯಕ್ಕೆ ಇದೀಗ
ವೇಗ ಸಿಕ್ಕಿದ್ದು, ಇಷ್ಟರಲ್ಲೇ ಸುಂದರವಾದ ಕಟ್ಟಡ ಮೇಲೆದ್ದು ನಿಲ್ಲಲಿದೆ.
ತಾಲ್ಲೂಕಿನ ಸೆರಗಂಚಿನಲ್ಲಿರುವ ಅಂಬಳೆ ಗ್ರಾಮದ ಗ್ರಾಮ ಪಂಚಾಯ್ತಿ ಕಟ್ಟಡ ಹಿಂಭಾಗದಲ್ಲೇ ನಿರ್ಮಾಣಗೊಳ್ಳುತ್ತಿರುವ ಭವನದ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿದ್ದು, ಮೇಲ್ಚಾವಣಿ ಹಂತಕ್ಕೆ ಬಂದಿದೆ.
ನಿರ್ಮಿತಿ ಕೇಂದ್ರವು ಭವನ ನಿರ್ಮಾಣದ ಹೊಣೆ ಹೊತ್ತಿದ್ದು, ಅಂಬಳೆಯಲ್ಲೇ ಹುಟ್ಟಿ ಬೆಳೆದ ಕನ್ನಡದ ಅಶ್ವಿನಿ ದೇವತೆಗಳಲ್ಲೊಬ್ಬರು ಎನ್ನುವ ಖ್ಯಾತಿ ಗಳಿಸಿದ್ದ ಎ.ಆರ್.ಕೃಷ್ಣಶಾಸ್ತ್ರಿಗಳ ಹೆಸರು ಭವನ ನಿರ್ಮಾಣದ ಜೊತೆಗೆ ಇಲ್ಲಿ ಅಜರಾಮರಗೊಳ್ಳಲಿದೆ.
ಸುಸಜ್ಜಿತ ಸಭಾಂಗಣ, ಗ್ರಂಥಾಲಯ
ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಪೂರಕವಾದ ಸಭಾಂಗಣ ಸೇರಿದಂತೆ ಕೃಷ್ಣಶಾಸ್ತ್ರಿಗಳ ಬದುಕು, ಅವರ ಸಾಹಿತ್ಯವನ್ನು ಪರಿಚಯಿಸುವ ವಸ್ತುಗಳು, ಸಾಹಿತ್ಯದ ಕೃತಿಗಳನ್ನು ಇಲ್ಲಿ ಸಂರಕ್ಷಿಸಿಡುವುದು ಜೊತೆಗೆ ಅವುಗಳ ಬಗ್ಗೆ ಅಧ್ಯಯನ ನಡೆಸಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲು ಸಹಕಾರಿಯಾಗುವಂತೆ ಇಲ್ಲಿ ಗ್ರಂಥಾಲಯವೊಂದನ್ನು ತೆರೆಯಲಾಗುತ್ತಿದೆ.
ಅಡ್ಡಿಗಳೆಲ್ಲಾ ನಿವಾರಣೆ
ಭವನವನ್ನು ಎಲ್ಲಿ ನಿರ್ಮಿಸಬೇಕು ಎನ್ನುವ ವಿಚಾರದಲ್ಲಿ ಚಿಕ್ಕಮಗಳೂರು ನಗರದಲ್ಲಿರುವ ಸಾಹಿತ್ಯಾಸಕ್ತರಲ್ಲೇ ಭಿನ್ನಾಭಿಪ್ರಾಯಗಳು ಇದ್ದ ಕಾರಣ ಅನುದಾನ ಬಿಡುಗಡೆಗೊಂಡರೂ ಹಲವು ವರ್ಷಗಳ ಕಾಲ ಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿರಲಿಲ್ಲ. ಸಾಹಿತಿಗಳು, ಸಾಹಿತ್ಯಾಸಕ್ತರ ಒಂದು ಗುಂಪು ಚಿಕ್ಕಮಗಳೂರು ನಗರದಲ್ಲೇ ಭವನ ನಿರ್ಮಾಣವಾಗಬೇಕು. ಅಂಬಳೆಯಲ್ಲಿ ನಿರ್ಮಾಣವಾದರೆ ನಗರದಿಂದ ಏಳೆಂಟು ಕಿ.ಮೀ.ದೂರ ಹೋಗಿ ಕಾರ್ಯಕ್ರಮಗಳನ್ನು ನಡೆಸುವುದು, ಅದನ್ನು ಆಸ್ವಾದಿಸುವುದಕ್ಕೆ ಕಷ್ಟವಾಗುತ್ತದೆ ಎನ್ನುವ ಅಭಿಪ್ರಾಯ ವಾದ ಮಂಡಿಸಿತ್ತು.
ಮತ್ತೊಂದು ಗುಂಪು ಅಂಬಳೆ ಗ್ರಾಮ ಹೋಬಳಿ ಕೇಂದ್ರವಾಗಿದ್ದು, ಕೃಷ್ಣಶಾಸ್ತ್ರಿಗಳ ಹುಟ್ಟೂರು ಸಹ ಆಗಿದೆ. ಅಲ್ಲಿಯೇ ಭವನ ನಿರ್ಮಾಣಗೊಳ್ಳುವುದು ಅರ್ಥಪೂರ್ಣ. ಇದರಿಂದ ಗ್ರಾಮೀಣ ಭಾಗಕ್ಕೂ ಒಂದಷ್ಟು ಸಾಹತ್ಯದ ಕಾರ್ಯಕ್ರಮಗಳು ವಿಸ್ತರಿಸಿದಂತಾಗುತ್ತದೆ ಎನ್ನುವ ಅನಿಸಿಕೆ ವ್ಯಕ್ತಪಡಿಸಿತ್ತು. ಇದೀಗ ಎಲ್ಲಾ ಅಡಚಣೆಗಳೂ ನಿವಾರಣೆ ಆಗಿ ಕಟ್ಟಡ ಕಾಮಗಾರಿ ನಡೆಯುತ್ತಿದೆ.
ಬಿಜೆಪಿ ಸರ್ಕಾರದ ಕೊಡುಗೆ
2009 ರಲ್ಲೇ ಅಂದಿನ ಬಿಜೆಪಿ ಸರ್ಕಾರ ಈ ಭವನ ನಿರ್ಮಾಣಕ್ಕೆ ಮೊದಲ ಬಾರಿಗೆ 90 ಲಕ್ಷ ರೂ.ಗಳಿಗೆ ಅನುಮೋದನೆ ನೀಡಿ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು. ಭವನ ನಿರ್ಮಾಣ ಕಾಮಗಾರಿಯನ್ನು ಪಿಡಬ್ಲ್ಯುಡಿಗೆ ವಹಿಸಲಾಗಿತ್ತು. ಅಂದು ಪಿಡಬ್ಲ್ಯುಡಿ 90 ಲಕ್ಷ ರೂ. ಅನುದಾನ ಸಾಕಾಗುವುದಿಲ್ಲ ಎಂದು ಕಾರಣ ನೀಡಿ 1.30 ಕೋಟಿ ರೂ.ಗಳಿಗೆ ಮರು ಅಂದಾಜುಪಟ್ಟಿಯನ್ನು ಸಲ್ಲಿಸಿತು. ಇದಾದ ನಂತರ ಸುಮಾರು ಎರಡೂವರೆ ವರ್ಷ ಕಾಲ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು
ನಂತರ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ರಾ,ಪಂ.ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಾಹಿತಿ ಕೃಷ್ಣಶಾಸ್ತ್ರಿಗಳು ನೆನಪಾದರು. ಮರು ಅಂದಾಜುಪಟ್ಟಿಗೆ ಅನುಮೋದನೆ ಸಿಗದ್ದರೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಅಭಯ್‍ಚಂದ್ರ ಜೈನ್ ಅವರನ್ನು ಕರೆಸಿ ತರಾತುರಿಯಲ್ಲಿ ಕಾಮಗಾರಿಗೆ ಅಡಿಗಲ್ಲು ಹಾಕಿಸಿತ್ತು. ನಂತರ ಚುನಾವಣೆ ಸಬೂಬು ಹೇಳಿಕೊಂಡು ಕಾಮಗಾರಿ ನಿಲ್ಲಿಸಲಾಗಿತ್ತು.
ಕಾಂಗ್ರೆಸ್ ಸರ್ಕಾರದ ಅವಧಿ ಮುಗಿದು ನಂತರ ಬಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳುವವರೆಗೂ ಕಾಮಗಾರಿ ಆರಂಭಗೊಳ್ಳಲಿಲ್ಲ ಇದೀಗ ಮತ್ತೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಟಿ.ರವಿ ಅವರ ಆಸಕ್ತಿಯಿಂದಾಗಿ ಭವನ ನಿರ್ಮಾಣ ಕಾಮಗಾರಿಗೆ ಮತ್ತೆ ಚಾಲನೆ ಸಿಕ್ಕಿದೆ.
ಸಾಹಿತ್ಯ ಚಟುವಟಿಕೆಗೆ ಪೂರಕ
ಇದರೊಂದಿಗೆ ಹಲವು ಐತಿಹಾಸಿಕ ಹಿನ್ನೆಲೆಗಳಿಂದ ಗಮನ ಸೆಳೆದಿರುವ ಅಂಬಳೆ ಗ್ರಾಮ ಸಾಹಿತ್ಯ ಚಟುವಟಿಕೆಗಳ ಕೇಂದ್ರಬಿಂದುವಾಗಲಿದೆ. ಇದರ ಪರಿಣಾಮ ಗ್ರಾಮದ ಅಭಿವೃದ್ಧಿಗೂ ಸಹಕಾರ ಆಗಲಿದೆ ಎನ್ನುವುದು ಗ್ರಾಮದ ಜನರ ಆಶಾಭಾವನೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!