ವಿಜಯನಗರದ ವೈಭವಕ್ಕೆ ಸಾಕ್ಷಿಯಾಗಲಿದೆ ಧ್ವನಿ-ಬೆಳಕು: ಸಚಿವ ಆನಂದ್ ಸಿಂಗ್

ಹೊಸದಿಗಂತ ವರದಿ, ವಿಜಯನಗರ:

ಹಂಪಿ ಉತ್ಸವ ಹಿನ್ನೆಲೆ ವಿಶೇಷವಾಗಿ ಆಯೋಜಿಸಲಾಗಿರುವ ಧ್ವನಿ ಮತ್ತು ಬೆಳಕು ವಿಶೇಷ ಪ್ರದರ್ಶನ ಕಾರ್ಯಕ್ರಮ ಜ.26ರಿಂದ ಫೆ.2ರವರೆಗೆ ನಡೆಯಲಿದೆ ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದರು. ಹಂಪಿಯ ಗಜಶಾಲೆ ಆವರಣದಲ್ಲಿ ಪ್ರದರ್ಶಿಸಲಾಗುವ ‘ವಿಜಯನಗರ ವೈಭವ’ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಸಿದ್ಧತೆ ಹಾಗೂ ಕಲಾವಿದರ ತಾಲೀಮನ್ನು ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನೆಲೆಗೊಳಿಸಲು ಗತವೈಭವವನ್ನು ಈ ಧ್ವನಿ-ಬೆಳಕು ಮೂಲಕ ಸಾರಲಿದೆ ಎಂದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿ ಆಯೋಜಿಸಿದ್ದು, ಸಾರ್ವಜನಿಕರು ಪ್ರಶಾಂತ ವಾತಾವರಣದಲ್ಲಿ ಗತವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಧ್ವನಿ ಮತ್ತು ಬೆಳಕು ಪ್ರದರ್ಶನದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಈಗಾಗಲೇ ತಾಲೀಮು ಆರಂಭಿಸಿದ್ದಾರೆ ಎಂದರು.
ಜ.25ಕ್ಕೆ ತುಂಗಾರತಿ ಕಾರ್ಯಕ್ರಮ; ಜ.25ರಂದು ಸಂಜೆ ಹಂಪಿ ವಿರುಪಾಕ್ಷ ದೇವಸ್ಥಾನದ ಹಿಂಭಾಗದ ನದಿ ತೀರದಲ್ಲಿ ತುಂಗಾರತಿ ನೆರವೇರಲಿದೆ ಎಂದರು. ನಂತರ ಜಿಲ್ಲಾಧಿಕಾರಿ ಟಿ.ವೆಂಕಟೇಶ ಮಾತನಾಡಿ, ನಿಗದಿತ ಸಮಯದಲ್ಲಿ ಪ್ರದರ್ಶನಕ್ಕೆ ಅವಶ್ಯವುಳ್ಳ ಎಲ್ಲಾ ಸಿದ್ಧತೆಗೆ ಬೇಕಾದ ಸೌಲಭ್ಯ, ಅನುದಾನ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ರಾಜ್ಯ ಸರ್ಕಾರದಿಂದ ಸಿಕ್ಕಿದೆ. ಹಂಪಿ ಉತ್ಸವದ ಮುಖ್ಯ ಆಕರ್ಷಣೀಯವಾಗಿ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಸಿಎಂ ಉದ್ಘಾಟನೆ; ಜ.27 ಹಂಪಿ ಉತ್ಸವದ ಉದ್ಘಾಟನೆ ನಡೆಯಲಿರುವ ಗಾಯಿತ್ರಿ ಪೀಠದ ಮುಖ್ಯವೇದಿಕೆಯಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಟಾರ್ಚ್ ಬೆಳಗುವ ಮೂಲಕ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸಾರಿಗೆ ವ್ಯವಸ್ಥೆ; ಸಂಚಾರ ನಿರ್ವಹಣೆಗಾಗಿ ಏಕಮುಖ ರಸ್ತೆ ನಿರ್ಮಾಣವಾಗಲಿದ್ದು, ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್‍ಗಳ ಸೇವೆ ಸಲ್ಲಿಸಲಿವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಸ್ಪಿ ಶ್ರೀಹರಿ ಬಾಬು, ಉಪವಿಭಾಗಾಧಿಕಾರಿ ಹಾಗೂ ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮೇಶ್ವರ, ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ  ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!