ಎಲ್ಲ ವಿವಾದಗಳಿಗೆ ಮೂಲ ಕಾಂಗ್ರೆಸ್: ಸಚಿವ ಕೆ.ಎಸ್. ಈಶ್ವರಪ್ಪ

ಹೊಸದಿಗಂತ ವರದಿ,ಮಂಗಳೂರು:

ರಾಜ್ಯದಲ್ಲಿ ಹಿಜಾಬ್ ಸಹಿತ ಎಲ್ಲ ವಿವಾದಗಳನ್ನು ಸೃಷ್ಟಿಸಿರುವುದೇ ಕಾಂಗ್ರೆಸ್. ಹೈಕಮಾಂಡ್ ಮೆಚ್ಚಿಸಲು ಸೌಹಾರ್ದತೆ ಕೆಡಿಸುವ ಹೇಳಿಕೆ ನೀಡುವ ಕಾಂಗ್ರೆಸ್ ಮುಖಂಡರು, ಬಿಜೆಪಿ, ಬಜರಂಗದಳ ವಿರುದ್ಧ ಸೌಹಾರ್ದತೆ ಕೆಡಿಸುತ್ತಿದ್ದಾರೆ ಎಂಬ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋಮು ಸೌಹಾರ್ದತೆ ಕೆಡಿಸುವ ಕೆಲಸವನ್ನು ಬಿಜೆಪಿ, ಬಜರಂಗದಳ ಮಾಡುತ್ತಿದೆ ಎಂದು ದೊಡ್ಡ ಧ್ವನಿಯಲ್ಲಿ ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಇದು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಮಾಡುತ್ತಿರುವ ಆರೋಪಗಳಷ್ಟೇ. ಸೋನಿಯಾ ಗಾಂಧಿ ಅವರಿಗೆ ತಲುಪಲಿ ಎಂದು ಹೀಗೆ ಮಾಡುತ್ತಿದ್ದಾರೆ ಎಂದರು.
ಮುಸ್ಲಿಮರನ್ನು ಮೆಚ್ಚಿಸುವ ಕೆಲಸವನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸಿಗರು ಮಾಡುತ್ತಿದ್ದಾರೆ. ಇಲ್ಲಿಯ ತನಕ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಉಡುಪಿಯಲ್ಲಿ ಆರು ಮಂದಿ ವಿದ್ಯಾರ್ಥಿನಿಯರು ಹಿಜಾಬ್ ವಿಚಾರವನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದರು. ಆರು ಜನ ವಿದ್ಯಾರ್ಥಿನಿಯರನ್ನು ಕಾಂಗ್ರೆಸ್, ಎಸ್‌ಡಿಪಿಐ, ಪಿಎಫ್‌ಐನವರು ಕರೆದು ಮಾತನಾಡಿ, ಅವರಿಗೆ ಬುದ್ದಿವಾದ ಹೇಳಿದ್ದರೆ ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಬರುತ್ತಿತ್ತೇ ಎಂದು ಪ್ರಶ್ನಿಸಿದ ಈಶ್ವರಪ್ಪ, ವಿವಾದವನ್ನು ಹುಟ್ಟುಹಾಕಿದ್ದು ಅವರೇ, ಅವರು ಹುಟ್ಟುಹಾಕಿ ಬಜರಂಗದಳ, ಬಿಜೆಪಿ, ಸಂಘ ಪರಿವಾರದವರು ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಕೊಲೆಗಡುಕರನ್ನು ಮುಸ್ಲಿಂ ಗೂಂಡಾಗಳು ಎಂದು ಕರೆಯದೆ ಒಳ್ಳೆಯವರು ಅಂತ ಕರೆಯಬೇಕಾ, ಆ ಕೊಲೆಗಡುಕರನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಏನೆಂದು ಕರೆಯುತ್ತಾರೆ? ರಾಜ್ಯದಲ್ಲಿ ಶಾಂತಿ ಕಾಪಾಡಬೇಕೆಂಬ ಉದ್ದೇಶ ಬಿಜೆಪಿಗೆ ಇದೆ. ಆದರೆ ಕಾಂಗ್ರೆಸ್‌ನವರು ಹಿಜಾಬ್ ಬಗ್ಗೆ ಅಥವಾ ಹರ್ಷ ಕೊಲೆ ಬಗ್ಗೆ ಮುಸಲ್ಮಾನರು ಸಂತೃಪ್ತಿ ಪಡುವಂತೆ ಹೇಳಿಕೆ ನೀಡುತ್ತಿದ್ದಾರೆ.
ಹಿಂದೂ-ಮುಸ್ಲಿಂ ಎರಡು ಕಣ್ಣುಗಳು ಅಂತ ನೋಡಿದ್ದಾರೆಯೇ, ನೋಡಿದಿದ್ದರೆ ಇಂದು ಇಂತಹ ಕೋಮು ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಕೋಮು ದ್ವೇಷಕ್ಕೆ ಕಾರಣ ಪಿಎಫ್‌ಐ ಮತ್ತು ಎಸ್‌ಡಿಪಿಐ ಎಂದು ಹೇಳುತ್ತಾರೆ. ಹಿಜಾಬ್ ವಿವಾದದ ಬಳಿಕ ಎಲ್ಲ ಮುಸ್ಲಿಂ ಶಾಸಕರು ಇದನ್ನೇ ಹೇಳಿದರು. ಆದರೆ, ಅದೇ ವೇಳೆ ಸಿದ್ದರಾಮಯನವರು ಈ ಕೋಮು ದ್ವೇಷಕ್ಕೆ ಕಾರಣ ಆರೆಸ್ಸೆಸ್ ಮತ್ತು ಬಿಜೆಪಿ ಎಂದಿದ್ದಾರೆ. ನಾವು ಯಾವುದನ್ನು ನಂಬಬೇಕು. ಅವರ ಪಾಪವನ್ನ ನಮ್ಮ ಮೇಲೆ ಹೊರಿಸಲು ಯತ್ನಿಸುತ್ತಿದ್ದಾರೆ ಹಳ್ಳಿಜನ ಸೇರಿದಂತೆ ಎಲ್ಲರೂ ಕೂಡ ಕಾಂಗ್ರೆಸಿಗರನ್ನು ಗಮನಿಸುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಮತ್ತು ಡಿಕೆಶಿಯವರು ಮೇಲ್ನೋಟಕ್ಕಾದರೂ ನಾವು ಚೆನ್ನಾಗಿದ್ದೀವೆ ಎಂದು ತೋರಿಸಲು ಜತೆಯಾಗಿ ಪತ್ರಿಕಾಗೋಷ್ಠಿ ಮಾಡುತ್ತಾರೆ. ಸಿದ್ದರಾಮಯ್ಯ ಸಾಧು ಸಂತರನ್ನು ಅವಮಾನಿಸಿ ಹೇಳಿಕೆ ನೀಡಿದಾಗ ಅವರನ್ನು ಕಾಂಗ್ರೆಸ್‌ನ ಯಾರೂ ಸಮರ್ಥಿಸಿಕೊಳ್ಳಲಿಲ್ಲ ಸ್ವತಃ ಡಿ.ಕೆ.ಶಿವಕುಮಾರ್ ಕೂಡ ಸಮರ್ಥಿಸಿಕೊಳ್ಳಲಿಲ್ಲ. ಇದರಲ್ಲಿ ಗೊತ್ತಾಗುವುದಿಲ್ಲವೇ ಕಾಂಗ್ರೆಸ್‌ನಲ್ಲಿ ಬಣಗಳಿವೆ ಎಂದು ಪ್ರಶ್ನಿಸಿದರು.
ಹಲಾಲ್ ಮತ್ತು ಜಟ್ಕಾ ಕಟ್ ವಿಚಾರ ಇಂದು ಚರ್ಚೆಯಾಗುತ್ತಿದೆ. ಮುಸ್ಲಿಮರು ಹಲಾಲ್ ಮಾಡಿದ್ದನ್ನು ತಿನ್ನಲಿ, ಹಿಂದುಗಳ ಜಟ್ಕ ಕಟ್ ತಿನ್ನಲಿ. ಇದರಿಂದ ಕಾಂಗ್ರೆಸಿಗರಿಗೆ ಏನು ತೊಂದರೆ. ಈ ಬಗ್ಗೆ ಏಕೆ ಬೊಬ್ಬೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಆನಂದವಾಗಿರಬಾರದೆಂದು ಹೀಗೆ ಮಾಡುತ್ತಿದ್ದಾರೆ. ಹಿಂದಿನಿಂದಲೂ ಇವರು ಇದೇ ಕಿತಾಪತಿ ಮಾಡಿಕೊಂಡು ಬಂದಿದ್ದಾರೆ ಎಂದು ಈಶ್ವರಪ್ಪ ಕಿಡಿ ಕಾರಿದರು.
ಬಿಜೆಪಿ ವಿರುದ್ಧ ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಟೀಕಿಸಲು ಕುಮಾರಸ್ವಾಮಿಗೆ ಶಕ್ತಿಯೂ ಇಲ್ಲ, ಅಕಾರವೂ ಇಲ್ಲ. ಬಿಜೆಪಿ ವಿರುದ್ಧ ಟೀಕೆ ಮಾಡಿದವರೆಲ್ಲ ನೆಗೆದು ಬಿದ್ದು ಹೋದರು. ಕುಮಾರಸ್ವಾಮಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಸ್ಪರ್ಧೆಗೆ ಇಳಿದು ಮುಸ್ಲಿಮರನ್ನು ಓಲೈಸಲು ಈ ರೀತಿ ಟೀಕೆ ಮಾಡುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!