Thursday, July 7, 2022

Latest Posts

ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ವಿವಿಧೆಡೆ ವರುಣನ ಆರ್ಭಟ: ಗದ್ದೆಗಳು ಜಲಾವೃತ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸ ದಿಗಂತ ವರದಿ, ಮಡಿಕೇರಿ:

ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬಹುತೇಕ ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ನದಿ, ಕೆರೆ ತುಂಬಿಕೊಂಡಿದ್ದು, ಗದ್ದೆಗಳು ಜಲಾವೃತಗೊಂಡಿವೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಶ್ರೀಮಂಗಲ ಹೋಬಳಿಯ ಕೆ. ಬಾಡಗ ಗ್ರಾಮದ ನಿವಾಸಿ ಕುಶಾಲಪ್ಪ ಎಂಬವರ ವಾಸದ ಮನೆಯ ಗೋಡೆ ಕುಸಿದು ಬಿದ್ದು, ಅಪಾರ ನಷ್ಟ ಸಂಭವಿಸಿದೆ. ಕುಮಟೂರು ಗ್ರಾಮದ ಪಿ. ಕೆ. ಸೋಮಯ್ಯ ಅವರ ಮನೆಯೂ ಮಳೆ ಹಾಗೂ ಗಾಳಿಯ ತೀವ್ರತೆಗೆ ಹಾನಿಯಾಗಿದೆ.
ದೇವರಪುರ ಗ್ರಾ.ಪಂ. ವ್ಯಾಪ್ತಿಯ ದೇವರಪುರ ಕಾಲನಿಯ ಮುತ್ತ ಅವರ ಮನೆಯ ಛಾವಣಿಯ ಮೇಲೆ ಮರ ಬಿದ್ದಿದೆ. ಬಾಳೆಲೆ, ನಿಟ್ಟೂರು ಹಳೆ ಸೇತುವೆಯ ಮೇಲ್ಬಾಗದಲ್ಲಿ ನೀರು ತುಂಬಿ ಹರಿಯುತ್ತಿದ್ದು, ಸುತ್ತಲಿನ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ. ಲಕ್ಷ್ಮಣ ತೀರ್ಥ ನದಿಯ ಹರಿಯುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಇರ್ಪು ಜಲಪಾತ ಬೋರ್ಗರೆದು ಧುಮ್ಮಿಕ್ಕುತ್ತಿದೆ.
ಗೋಣಿಕೊಪ್ಪದ ಕೀರೆಹೊಳೆ ತುಂಬಿ ಹರಿಯುತ್ತಿದ್ದು, ವರ್ಷಂಪ್ರತಿಯಂತೆ ಎರಡನೇ ಮತ್ತು ಮೂರನೇ ವಿಭಾಗದ ನಿವಾಸಿಗಳಿಗೆ ಪ್ರವಾಹದ ಆತಂಕ ಎದುರಾಗಿದೆ.
ಪೊನ್ನಂಪೇಟೆ, ತಿತಿಮತಿ, ಪಾಲಿಬೆಟ್ಟ, ಹುದಿಕೇರಿ, ಟಿ. ಶೆಟ್ಟಿಗೇರಿ, ಬಿರುನಾಣಿ, ತೆರಾಲು, ಬಿ.ಶೆಟ್ಟಿಗೇರಿ, ಬೀರುಗ ಸೇರಿದಂತೆ ತಾಲೂಕಿನ ಬಹುಭಾಗಗಳಲ್ಲಿ ಮಳೆಯ ತೀವ್ರತೆ ಅಧಿಕಗೊಂಡಿದೆ. ಕೆಲವು ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳಿಗೆ ಆತಂಕ ಎದುರಾಗಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಳಜಿ ಕೇಂದ್ರಗಳನ್ನು ತೆರೆಯಲು ಮುಂದಾಗಿವೆ.
ಹಾನಿ ಸಂಭವಿಸಿದ ತಾಲೂಕಿನ ಪ್ರದೇಶಗಳಿಗೆ ತಾಲೂಕು ತಹಶೀಲ್ದಾರ್‌ ಯೋಗಾನಂದ ಅವರು ಭೇಟಿ ನೀಡಿ ಪರಿಶೀಲಿಸಿದ್ದು,ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆಯ ಸಿಬ್ಬಂದಿ ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss