Thursday, June 30, 2022

Latest Posts

ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಒದಗಿಸಿ: ಉಸ್ತುವಾರಿ ಸಚಿವರ ಗಮನಸೆಳೆದ ರೈತ ಸಂಘದ ಪ್ರಮುಖರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕೊಡಗು:

ಕೊಡಗು ಜಿಲ್ಲೆಯ ರೈತರು, ಕಾರ್ಮಿಕರು, ಸಾರ್ವಜನಿಕರು ಕಳೆದ ಮೂರು ವರ್ಷಗಳಿಂದ ಅತ್ಯಂತ ಸಂಕಷ್ಟಕ್ಕೊಳಗಾಗಿದ್ದು ಹಲವಾರು ಸಮಸ್ಯೆಗಳ ನಡುವೆ ಜೀವನ ನಡೆಸುವಂತಾಗಿದೆ. ಪ್ರವಾಹ, ಪ್ರಕೃತಿ ವಿಕೋಪ,ಬೆಳೆ ನಷ್ಟ, ಕಾಡುಪ್ರಾಣಿಗಳ ಹಾವಳಿ ಜೊತೆಗೆ ಕೋವಿಡ್ ಲಾಕ್ ಡೌನ್ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರನ್ನು ವೀರಾಜಪೇಟೆಯಲ್ಲಿ ಭೇಟಿ ಮಾಡಿ ಜಿಲ್ಲೆಯ ಗಂಭೀರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು,ಕಾಡು ಪ್ರಾಣಿಗಳ ಹಾವಳಿಯಿಂದ ನಿರಂತರ ಕಾಡಾನೆ, ಹುಲಿ ಹಾವಳಿಯಿಂದ ಬೆಳೆ ನಷ್ಟದೊಂದಿಗೆ ಜಾನುವಾರುಗಳು ಬಲಿಯಾಗುತ್ತಿವೆ.ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಪರಿಣಾಮ ಸಾವು ನೋವುಗಳು ಸಂಭವಿಸುತ್ತಲೇ ಇದೆ.
ಮಳೆ ಹಾಗೂ ಪ್ರಕೃತಿ ವಿಕೋಪದಿಂದ ರೈತರು ಬೆಳೆದ ಫಸಲುಗಳು ಕೈಗೆ ಸಿಗದಂತಾಗಿದ್ದು ಕೃಷಿ ಫಸಲಿಗೆ ಮಾಡಿದ ಸಾಲಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಕೊಡಗಿನ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕೆಲವು ರೈತರು ಬೆಳೆದ ಫಸಲುಗಳಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸಿದ್ದು, ಈ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಕೃಷಿ ಫಸಲಿಗೆ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಪಡೆದ ಸಾಲ ಮರುಪಾವತಿ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಸಿಗುವಂತಾಗಬೇಕು‌. ಕಾಡುಪ್ರಾಣಿಗಳು ಕಾಫಿ ತೋಟ ಹಾಗೂ ಗ್ರಾಮಗಳತ್ತ ಬರದ ಹಾಗೆ ಶಾಶ್ವತವಾಗಿ ತಡೆಗಟ್ಟಬೇಕು.ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಫಸಲು ನಾಶ ಮಾಡುವ ಮೂಲಕ ಬೆಳೆಗಾರರು ಹಾಗೂ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿರುವ ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು.ವನ್ಯಪ್ರಾಣಿಗಳ ದಾಳಿಯಿಂದ ಸತ್ತ ಜಾನುವಾರುಗಳಿಗೆ ಪರಿಹಾರ ಹೆಚ್ಚಿಸುವ ಮೂಲಕ ತಕ್ಷಣ ನೀಡಬೇಕು ಎಂದೂ ಗಮನಸೆಳೆದರು.
ಗ್ರಾಮೀಣ ಭಾಗದಲ್ಲಿರುವ ಪ್ರತಿಯೊಬ್ಬರಿಗೂ ಶೀಘ್ರವಾಗಿ ಲಸಿಕೆ ಸಿಗುವಂತಾಗಬೇಕು, ಕೊಡಗಿನ ಕುಟ್ಟ, ಬಾಳೆಲೆ, ಕಾನೂರು, ಶ್ರೀಮಂಗಲ, ಹುದಿಕೇರಿ, ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಸಾಮಾನ್ಯ ಜನರ ಸೇವೆಗೆ ಆಂಬ್ಯುಲೆನ್ಸ್, ಆಮ್ಲಜನಕ, ಕ್ಷಕಿರಣ ಸೇರಿದಂತೆ ಆರೋಗ್ಯ ಸೇವೆಗಳು ಸಿಗುವಂತಾಗಬೇಕು ಎಂದೂ ಮನು ಸೋಮಯ್ಯ ತಿಳಿಸಿದರು.
ಲಾಕ್ ಡೌನ್ ಅವಧಿಯನ್ನು ಜೂನ್ ಅಂತ್ಯದ ವರೆಗೆ ಮುಂದುವರಿಸಬೇಕು.ಕೋವಿಡ್ ಸಂದರ್ಭದಲ್ಲೂ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಶುಲ್ಕ ಹೆಚ್ಚು ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.ಕೊಡಗಿನ ಜನರ ಹಿತ ಕಾಯುವ ಮೂಲಕ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು .
ಈ ಸಂದರ್ಭ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ,ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರುಗಳೂ ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ,ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ,ಅಮ್ಮತ್ತಿ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಣ್ಣ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶ, ಮಾಯಮುಡಿ ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ, ಪೊನ್ನಂಪೇಟೆ ಸಂಚಾಲಕ ಚೊಟ್ಟೆಕಾಳಪಂಡ ಮನು,
ನಲ್ಲೂರು ಅಧ್ಯಕ್ಷ ತೀತರಮಾಡ ರಾಜ,ಸಿದ್ದಾಪುರ ವಲಯದ ಕಾರ್ಯದರ್ಶಿ ಲಿಖಿತ್ , ಪ್ರಮುಖರಾದ ಚೆಪ್ಪುಡಿರ ಕಿರಣ್ ಕುಟ್ಟಪ್ಪ ಮತ್ತಿತರರು ಹಾಜರಿದ್ದರು .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss