Thursday, August 11, 2022

Latest Posts

ಆಧ್ಯಾತ್ಮಿಕ-ಲೌಕಿಕ ಜೀವನ ವಿಮಾನದ ಎರಡು ರೆಕ್ಕೆಗಳಿದ್ದಂತೆ: ಡಾ. ಎ.ಆರ್. ಉಪಾಧ್ಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮೈಸೂರು:

ಆಧ್ಯಾತ್ಮಿಕ ಮತ್ತು ಲೌಕಿಕ ಜೀವನ ವಿಮಾನದ ಎರಡು ರೆಕ್ಕೆಗಳಿದ್ದಂತೆ. ಅದರಲ್ಲಿ ಒಂದಕ್ಕೆ ಹಾನಿಯಾದರೂ ಅಪಘಾತ ಸಂಭವಿಸಬಹದು ಎಂದು ಬೆಂಗಳೂರು ಎನ್‌ಎಎಲ್ ಟೆಕ್‌ನ ಉಪಾಧ್ಯಕ್ಷ ಡಾ. ಎ.ಆರ್. ಉಪಾಧ್ಯ ಹೇಳಿದರು.
ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-23’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವೈಮಾಂತರಿಕ್ಷದ ಪ್ರಗತಿ ಮತ್ತು ಜೀವನದ ಪಾಠಗಳು’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ವಿಮಾನದ ತಂತ್ರಜ್ಞಾನವು ವಿವಿಧ ಹಂತದಲ್ಲಿ ಅಭಿವೃದ್ಧಿಗೊಂಡ ಬಗೆಯನ್ನು ತಿಳಿಸಿ, ಆಕಾಶದಲ್ಲಿ ಹಾರುವ ಹಕ್ಕಿಯನ್ನು ಕಂಡು ಅದರಂತೆ ಹಾರಲು ಬಯಸಿದ ಮನುಷ್ಯ, ಅದರಲ್ಲಿ ಯಶಸ್ಸನ್ನು ಕಂಡ. ಭಾರತೀಯ ಪುರಾಣಗಳಲ್ಲಿ ವಿಮಾನದ ಬಗ್ಗೆ ಅನೇಕ ಉಲ್ಲೇಖಗಳಿವೆ. ಋಗ್ವೇದ ಮತ್ತು ಯಜುರ್ವೇದಗಳಲ್ಲೂ ಇದರ ಪ್ರಸ್ತಾಪವಿದೆ. ಪುಷ್ಪಕ ವಿಮಾನದ ಪರಿಕಲ್ಪನೆಯನ್ನು ನಾವು ಅನೇಕ ಪುರಾಣಗಳಲ್ಲಿ ಕೇಳಿದ್ದೇವೆ. ರೈಟ್ ಸಹೋದರರಿಗಿಂತ ಮೊದಲು ಸಾಕಷ್ಟು ವಿಜ್ಞಾನಿಗಳು ವೈಮಾನಿಕ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದರು, ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಹಿಂದಿನ ವಿಜ್ಞಾನಿಗಳ ಅಧ್ಯಯನ ಮತ್ತು ಅವರ ವಿಫಲತೆಯ ಅಂಶಗಳನ್ನು ಗುರುತಿಸಿ ರೈಟ್ ಸಹೋದರರು 1903ರಲ್ಲಿ ವಿಮಾನವನ್ನು ಹಾರಿಸಲು ಪ್ರಯತ್ನಿಸಿದರು. ಇದರಿಂದ ನಾವು ಕಂಡುಕೊಳ್ಳಬೇಕಾದ ಸತ್ಯವೇನೆಂದರೆ ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ ಎಂಬುದು. ಆತ್ಮವಿಶ್ವಾಸ, ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು. ಸೋಲೇ ಗೆಲುವಿನ ಮೆಟ್ಟಿಲು ಎಂಬುದಕ್ಕೆ ಈ ವಿಮಾನ ತಂತ್ರಜ್ಞಾನವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದ ವಿಜ್ಞಾನಿಗಳೇ ಉದಾಹರಣೆ ಎಂದು ಹೇಳಿದರು.
ಮನುಷ್ಯನಿಗೆ ಲೌಕಿಕ ಜೀವನದ ಜೊತೆಗೆ ಆಧ್ಯಾತ್ಮಿಕ ಜೀವನವೂ ಅಷ್ಟೇ ಮುಖ್ಯ. ಪ್ರಾರ್ಥನೆ, ಧ್ಯಾನ ಮತ್ತು ಪೂಜೆಯಲ್ಲಿಯೂ ನಮ್ಮನ್ನು ತೊಡಗಿಸಿಕೊಳ್ಳಬೇಕು. ಮಾನಸಿಕ ಮತ್ತು ದೈಹಿಕ ಸದೃಢತೆ ಬಹಳ ಮುಖ್ಯ. ಸಮಾಜದಲ್ಲಿ ಯಾರೂ ಇನ್ನೊಬ್ಬರಿಗಿಂತ ಕೀಳಲ್ಲ. ಒಬ್ಬರೊಂದಿಗೆ ಇನ್ನೊಬ್ಬರು ಸೇರಿ ಕೆಲಸ ಮಾಡಿದಾಗಲೇ ಅದು ಯಶಸ್ವಿಯಾಗುತ್ತದೆ, ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದು ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಉಪನ್ಯಾಸದ ನಂತರ ವೀಕ್ಷಕರ ಆಯ್ದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಆನ್‌ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss