ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಮಡಿಕೇರಿ:
ಟೊಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಕೋಚ್ ಆಗಿದ್ದ ಕೊಡಗಿನ ಅಂಕಿತಾ ಸುರೇಶ್ ಅವರ ಹುದ್ದೆಯನ್ನು ಖಾಯಂಗೊಳಿಸುವಂತೆ ಶಾಸಕ ಕೆ.ಜಿ.ಬೋಪಯ್ಯ ಅವರು ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳ ಗಮನಸೆಳೆದಿದ್ದಾರೆ.
ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಭೇಟಿಯಾದ ಕ್ರೀಡಾ ತಾರೆ ಅಂಕಿತಾ ಅವರಿಂದ ಬೋಪಯ್ಯ ಹಲವು ಮಾಹಿತಿ ಪಡೆದರು.
ತಾನು ಇನ್ನೂ ತಾತ್ಕಾಲಿಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಮಸ್ಯೆ ಇರುವುದಾಗಿ ಅಂಕಿತಾ ಶಾಸಕರಲ್ಲಿ ತಮ್ಮ ಅಳಲು ತೋಡಿಕೊಂಡರು.
ಈ ಸಮಸ್ಯೆ ಅರಿತ ಕೂಡಲೇ ಸ್ಪಂದಿಸಿದ ಬೋಪಯ್ಯ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಕೊಡಗಿನ ಕ್ರೀಡಾತಾರೆಯ ಹುದ್ದೆಯನ್ನು ಖಾಯಂಗೊಳಿಸುವಂತೆ ಸೂಚಿಸಿದರು. ಈ ಸಂಬಂಧ ರಾಜ್ಯ ಕ್ರೀಡಾ ಸಚಿವರೊಂದಿಗೂ ಶಾಸಕ ಬೋಪಯ್ಯ ಮಾತನಾಡಿ ಅಂಕಿತಾ ಅವರ ಸಮಸ್ಯೆ ಪರಿಹರಿಸುವಂತೆ ಕೋರಿದರು. ಶಾಸಕ ಕೆ.ಜಿ.ಬೋಪಯ್ಯ ಸಮಸ್ಯೆ ಆಲಿಸಿದ್ದಲ್ಲದೆ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದು ತನಗೆ ಸಮಾಧಾನ ತಂದಿದೆ. ಬೋಪಯ್ಯ ಅವರ ಸೂಚನೆ ಮೇರೆಗೆ ಅಧಿಕಾರಿಗಳೂ ಸ್ಪಂದಿಸಿದ್ದಾರೆ ಎಂದು ಅಂಕಿತಾ ಸುರೇಶ್ ತಿಳಿಸಿದ್ದಾರೆ.