ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ ಮಡಿಕೇರಿ:
ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪುಣ್ಯಸ್ಮರಣೆ : ವೀರ ಯೋಧನಿಗೆ ಶ್ರದ್ಧಾಂಜಲಿ ಅರ್ಪಣೆ
ಮಡಿಕೇರಿ: ಕೊಡವ ಮಕ್ಕಡ ಕೂಟ, ಅಜ್ಜಮಾಡ ಕುಟುಂಬ ಹಾಗೂ ಸ್ಕ್ವಾ.ಲೀ.ಅಜ್ಜಮಾಡ ಬಿ.ದೇವಯ್ಯ ಮೆಮೋರಿಯಲ್ ಟ್ರಸ್ಟ್ನ ಜಂಟಿ ಆಶ್ರಯದಲ್ಲಿ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಅವರ 56ನೇ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ನಗರದ ಸ್ಕ್ವಾ..ಲೀ.ಅಜ್ಜಮಾಡ ದೇವಯ್ಯ ವೃತ್ತದಲ್ಲಿ ದೇವಯ್ಯ ಅವರ ಭಾವಚಿತ್ರಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ, ಮೇಜರ್ ನಂಜಪ್ಪ ಸೇರಿದಂತೆ ಪ್ರಮುಖರು ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ವೀರರು ಹುಟ್ಟಿದ ನಾಡು ಕೊಡಗು ಜಿಲ್ಲೆಯ ಯುವ ಸಮೂಹ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ದೇಶವನ್ನು ಕಾಯುವ ಕೆಲಸ ಮಾಡಬೇಕು ಎಂದರು.
ವೀಣಾ ಅಚ್ಚಯ್ಯ ಮಾತನಾಡಿ, ವೀರರ ನಾಡೆನಿಸಿರುವ ಕೊಡಗಿನಲ್ಲಿ ಮತ್ತಷ್ಟು ವೀರ ಸೇನಾನಿಗಳು ಹುಟ್ಟಿಕೊಳ್ಳಬೇಕು, ಆ ಮೂಲಕ ಸೇನಾ ಕ್ಷೇತ್ರದಲ್ಲಿ ಬೆಳಗಬೇಕು ಎಂದು ಕರೆ ನೀಡಿದರು. ವೀರ ಯೋಧರ ಸ್ಮರಣೆಯೊಂದಿಗೆ ಪ್ರತಿಯೊಬ್ಬರೂ ದೇಶಾಭಿಮಾನವನ್ನು ಮೆರೆಯಬೇಕೆಂದು ಹೇಳಿದರು.
ಮೇಜರ್ ನಂಜಪ್ಪ ಮಾತನಾಡಿ, ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಅವರು ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸುವ ಮೂಲಕ ವೀರರೆನಿಸಿಕೊಂಡರು. ಈ ಇತಿಹಾಸವನ್ನು ಮುಂದಿನ ಪೀಳಿಗೆ ಸದಾ ಸ್ಮರಿಸುವಂತಾಗಬೇಕು ಎಂದರು.
ಸ್ಕ್ವ.ಲೀ.ಅಜ್ಜಮಾಡ ದೇವಯ್ಯ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಮಾತನಾಡಿ, ಭಾರತ, ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ದೇವಯ್ಯ ಅವರು ಸಾಹಸ ಮೆರೆದು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ಮರಣೋತ್ತರವಾಗಿ ಪಡೆದ ದೇವಯ್ಯ ಅವರು ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಅವರ ತ್ಯಾಗ ಬಲಿದಾನ ಅವಿಸ್ಮರಣೀಯ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ರಾಮದಾಸ್, ಕೂಟದ ಗೌರವ ಕಾರ್ಯದರ್ಶಿ ಪುತ್ತರಿರ ಕರುಣ್ಕಾಳಯ್ಯ, ಫೀ.ಮಾ. ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಸಂಚಾಲಕ ಮೇಜರ್ ನಂಜಪ್ಪ, ಅಜ್ಜಮಾಡ ಕುಟುಂಬದ ಅಧ್ಯಕ್ಷ ಅಜ್ಜಮಾಡ ಲವಕುಶಾಲಪ್ಪ, ಕಾರ್ಯದರ್ಶಿ ಎ.ಜಿ.ಬೋಪಯ್ಯ, ಖಜಾಂಚಿ ಚಂಗಪ್ಪ, ನಿರ್ದೇಶಕ ಎ.ಯು.ಬೋಪಣ್ಣ, ಪ್ರಮುಖರಾದ ಅಜ್ಜಮಾಡ ಎನ್.ಬೆಳ್ಯಪ್ಪ, ಅಜ್ಜಮಾಡ ನವೀನ್, ಸಿದ್ದು, ರಮೇಶ್, ಪವನ್, ಪೊಲೀಸ್ ಅಧಿಕಾರಿ ಐ.ಪಿ.ಮೇದಪ್ಪ ಹಾಗೂ ನಿವೃತ್ತ ಸೇನಾನಿಗಳು, ಎನ್ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ಅಭಿಮಾನಿ ಬಳಗ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿದರು.