ರಾಜಾಲಂಕಾರದಲ್ಲಿ ಕಂಗೊಳಿಸಿದ ಮೈಸೂರು ಆದಿದೈವ ಶ್ರೀ ಚೆಲುವನಾರಾಯಣ

ಹೊಸದಿಗಂತ ವರದಿ, ಮೇಲುಕೋಟೆ:

ಭಕ್ತರ ಇಷ್ಠಾರ್ಥಕರುಣಿಸಲು ಧರೆಗಿಳಿದ ಚಕ್ರವರ್ತಿಯಂತೆ ರಾಜಾಲಂಕಾರದಲ್ಲಿ ಕಂಗೊಳಿಸಿದ ಮೈಸೂರು ಯದುವಂಶದ ಅದಿದೈವ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಯ ದರ್ಶನ ಮಾಡಿದ ಸಹಸ್ರಾರು ಭಕ್ತರು ಧನ್ಯತಾಭಾವ ಅನುಭವಿಸಿದರು.

ವಿಜಯದಶಮಿಯಂದು ಶಂಖ, ಚಕ್ರ, ಗದಾ,ಪದ್ಮ ಕತ್ತಿ, ಬಿಲ್ಲುಬಾಣ ಮುಂತಾದ ದಿವ್ಯಾಯುಧಗಳನ್ನು ಧರಿಸಿ ಮೈಸೂರು ಪೇಟ, ಜರತಾರಿ ರೇಷ್ಮೆಪಂಚೆಯೊಂದಿಗೆ ಭವ್ಯವಾಗಿ ಅಲಂಕೃತನಾದ ಚೆಲುವನಾರಾಯಣಸ್ವಾಮಿ ದಿವ್ಯಸುಂದರ ರೂಪವನ್ನು ಜಯಘೋಷ ಹಾಕುತ್ತಾ ಭಕ್ತರು ಕಣ್ತುಂಬಿಕೊಂಡರು. ಬೆಳಿಗ್ಗೆ 6-30 ವೇಳೆಗೆ ದೇವಾಲಯದಲ್ಲಿ ನಿತ್ಯಕೈಂಕರ್ಯಪೂಜಾಕಾರ್ಯಗಳನ್ನು ಆರಂಬಿಸಿ 10ಗಂಟೆಯವೇಳೆಗೆ ಮುಕ್ತಾಯಗೊಳಿಸಲಾಯಿತು. ನಂತರ ಭಕ್ತರ ದರ್ಶನಕ್ಕೆ ಮುಕ್ತವಾಗಿ ಅವಕಾಶ ನೀಡಲಾಯಿತು. ಬೆಳಿಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ತಂಡೋಪತಂಡವಾಗಿ ದೇವಾಲಯಗಳಿಗೆ ಆಗಮಿಸಿ ಸರತಿಸಾಲಿನಲ್ಲಿ ನಿಂತು ಚೆಲುವನದರ್ಶನ ನಡೆಯುತ್ತಿದ್ದ ದೃಶ್ಯ ಇಡೀ ದಿನ ಕಂಡು ಬಂತು.

ಮಹಾವಿಷ್ಣುವಿನ ಅವತಾರ ರೂಪಿಯಾದ ಬೆಟ್ಟದೊಡೆಯ ಕುಂತಸಿಂಗ್ರಿ, ಯೋಗನರಸಿಂಹಸ್ವಾಮಿಗೂ ಪಾರಂಪರಿಕವಾದ ಮಹಾರಾಜರ ಅಲಂಕಾರ ಮಾಡಲಾಯಿತು. ಬೆಟ್ಟದ ದೇವಾಲಯದಲ್ಲೂ ಪೂಜಾಕೈಂಕರ್ಯಗಳನ್ನು 9ಗಂಟೆಯವೇಳೆಗೆ ಮುಕ್ತಾಯಗೊಳಿಸಿ ಭಕ್ತರದರ್ಶನಕ್ಕೆ ವ್ಯವಸ್ಥೆಮಾಡಲಾಗಿತ್ತು. ಕಲ್ಯಾಣಿ, ಬೆಟ್ಟ, ಹಾಗೂ ದೇವಾಲಯದ ಆವರಣಗಳಲ್ಲಿ ಭಕ್ತಸಾಗರವೇ ತುಂಬಿತುಳುಕುತ್ತಿತ್ತು.

ಭಕ್ತರಿಗೆ ಅನ್ನದಾನ : ಯತಿರಾಜದಾಸರ್ ಗುರುಪೀಠದಲ್ಲಿ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ನೇತೃತ್ವದಲ್ಲಿ ಎರಡೂ ಸಾವಿರಕ್ಕೂ ಅಧಿಕ ಭಕ್ತರಿಗೆ ಸಿಹಿಯೊಂದಿಗೆ ಅನ್ನದಾನ ಮಾಡಲಾಯಿತು. ಇದೇ ವೇಳೆ ಆಂದ್ರದ ಚಿನ್ನಜೀಯರ್ ಮಠದಲ್ಲೂ ಅನ್ನದಾನ ನಡೆಯಿತು ಮಹಾನವಮಿಯ ಅಂಗವಾಗಿ ಮಂಗಳವಾರ ದೇವಾಲಯದ ಆಯುದಗಳು, ಪಲ್ಲಕ್ಕಿ ಕುದುರೆವಾಹನ ದೊಡ್ಡಶೇಷವಾಹನ ಹಾಗೂ ಚೆಲುವನಾರಾಯಣಸ್ವಾಮಿ ದೇಗುಲದ ಸುತ್ತಲಗುಡಿಗಳಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ವಿಜಯದಶಮಿ ಮೆರವಣಿಗೆಗಾಗಿ ಇದೇ ಪ್ರಥಮ ಭಾರಿಗೆ ಗ್ರಾ.ಪಂ ಉಪಾಧ್ಯಕ್ಷ ವಾದ್ಯಾರ್ ತಿರುಮಲೈ ಕಾಳಜಿಯಪರಿಣಾಮ ಉತ್ಸವ ಬೀದಿಗಳು ಮತ್ತು ಬನ್ನಿಮಂಟಪಕ್ಕೆ ಬೀದಿ ದೀಪಗಳ ಜೊತೆಗೆ ಹೆಚ್ಚುವರಿ ಪೋಕಸ್ ಲೈಟ್‌ಗಳನ್ನು ಅಳವಡಿಸಿದ್ದು ಉತ್ತಮ ಬೆಳವಣಿಗೆಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!