Wednesday, August 10, 2022

Latest Posts

ಅಯೋಧ್ಯೆ ಸೇರಿತು ಶ್ರೀಲಂಕಾದ ಅಶೋಕ ವಾಟಿಕಾದ ಶಿಲೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಯೋಧ್ಯೆ: ಪ್ರಭು ಶ್ರೀರಾಮನ ಅಯೋಧ್ಯೆ ಮತ್ತು ಸೀತಾ ದೇವಿ ಉಳಿದಿದ್ದ ಲಂಕಾದ ಅಶೋಕವನ ಮತ್ತೊಮ್ಮೆ ಧಾರ್ಮಿಕವಾಗಿ ಬೆಸೆದುಕೊಂಡಿದೆ. ಗುರುವಾರ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಶ್ರೀಲಂಕಾದ ಸೀತಾ ಎಲಿಯಾ ಅಶೋಕ ವಾಟಿಕಾದಿಂದ ಶಿಲೆಯನ್ನು ಹಸ್ತಾಂತರಿಸಲಾಯಿತು.

ಶ್ರೀಲಂಕಾದ ರಾಯಭಾರಿ ಮಿಲಿಂದಾ ಮೊರಗೋಡ, ಅವರ ಪತ್ನಿ ಜೆನ್ನಿರ್ ಮೊರಗೋಡ, ಉಪ ರಾಯಭಾರಿ ನಿಲುಕಾ ಕದುರುಗಮುವಾ ಹಾಗೂ ಶ್ರೀಲಂಕಾ ಸರಕಾರದ ಇಬ್ಬರು ಸಚಿವರು ಹಾಗೂ ಗಣ್ಯರ ನಿಯೋಗ ಅಯೋಧ್ಯೆ ತಲುಪಿತು. ನಿಯೋಗ ಅಶೋಕ ವಾಟಿಕಾದಿಂದ ತಂದ ಪವಿತ್ರ ಶಿಲೆಯನ್ನು ಟ್ರಸ್ಟ್‌ಗೆ ನೀಡಿತು.

ಶ್ರೀರಾಮ ಜನ್ಮಭೂಮಿ ಸಂಕೀರ್ಣಕ್ಕೆ ಆಗಮಿಸಿದ ಅವರನ್ನು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ರಾಮಲಾಲಾ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಸ್ವಾಗತಿಸಿದರು. ಶ್ರೀರಾಮ ಲಲ್ಲಾಗೆ ಆರತಿ ಮತ್ತು ಪೂಜೆ ಸಲ್ಲಿಸಿದ ಶ್ರೀಲಂಕಾದ ರಾಯಭಾರಿ ಅವರು, ತಮ್ಮ ನಿಯೋಗದೊಂದಿಗೆ ರಾಮಮಂದಿರ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನೂ ವೀಕ್ಷಿಸಿದರು. ಈ ವೇಳೆ ಟ್ರಸ್ಟ್‌ನ ಡಾ. ಅನಿಲ್ ಮಿಶ್ರಾ, ವಿಮಲೇಂದ್ರ ಪ್ರತಾಪ್ ಮಿಶ್ರಾ ಮೊದಲಾದವರಿದ್ದರು.

ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಹೊಸ ಧಾರ್ಮಿಕ ಸಂಪರ್ಕ ಬೆಸೆದಿದೆ. ರಾಮಾಯಣ ಕಾಲಕ್ಕೆ ಸಂಬಂಧಿಸಿದ ಧಾರ್ಮಿಕ ಪ್ರಾಮುಖ್ಯತೆ ಪಡೆದ ಸ್ಥಳಗಳಿಗೆ ಭೇಟಿ ನೀಡಲು ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯವು ರಾಮಾಯಣ ಯಾತ್ರೆಯನ್ನು ಆಯೋಜಿಸುತ್ತದೆ. ಇದರಲ್ಲಿ ಭಾರತದಿಂದ ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ರಾಮಾಯಣ ಯಾತ್ರೆಯ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಶ್ರೀಲಂಕಾದ ರಾಯಭಾರಿ ಮಿಲಿಂದಾ ಮೊರಗೋಡ ಶ್ರೀಲಂಕಾದ ರಾಮಾಯಣ ಪ್ರವಾಸಕ್ಕೆ ಅಯೋಧ್ಯೆಯ ಜನರನ್ನು ಆಹ್ವಾನಿಸಿದರು.

ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀರಾಮನು ಸೀತೆ ಮತ್ತು ಲಕ್ಷ್ಮಣನೊಂದಿಗೆ ಕಾಡಿಗೆ ಹೋದಾಗ, ರಾವಣನು ಪಂಚವಟಿಯಿಂದ ತಾಯಿ ಸೀತೆಯನ್ನು ಅಪಹರಿಸುತ್ತಾನೆ. ಅಲ್ಲಿಂದ ಇಂದು ಸೀತಾ ಎಲಿಯಾ ಎಂದು ಕರೆಯಲ್ಪಡುವ ಶ್ರೀಲಂಕಾದ ಅಶೋಕ ವಾಟಿಕಾದಲ್ಲಿ ಸೀತೆಯನ್ನು ಬಂಧಿಸುತ್ತಾನೆ. ಇಂದು ಶ್ರೀಲಂಕಾದ ಅಶೋಕ ವಾಟಿಕಾದಲ್ಲಿರುವ ಸೀತಾ ಎಲಿಯಾ ಉದ್ಯಾನದಲ್ಲಿ ಲಕ್ಷಾಂತರ ಅಶೋಕ ಮರಗಳಿವೆ. ಇಲ್ಲಿ ರಾಮ ಜಾನಕಿ ದೇವಸ್ಥಾನವೂ ಇದೆ. ಜನರು ಈ ದೇವಾಲಯವನ್ನು ಸೀತಾ ಅಮ್ಮನ್ ಕೋವಿಲ್ ಎಂದು ಕರೆಯುತ್ತಾರೆ. ಇಂದಿಗೂ ಇಲ್ಲಿ ಹನುಮಂತನ ಪಾದದ ಗುರುತುಗಳಿವೆ ಎಂದು ಹೇಳಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss