ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಶ್ರೀಲಂಕಾ ಅಧ್ಯಕ್ಷ ಗೊಟಬಾಯಾ ರಾಜಪಕ್ಸ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ನಿಯಂತ್ರಿಸಲಾಗದ ಹಣದುಬ್ಬರ, ಖಾಲಿಯಾಗಿರುವ ವಿದೇಶಿ ವಿನಿಮಯ, ಹಣದ ಅಪಮೌಲ್ಯ ಇವೆಲ್ಲವೂ ನೆರೆಯ ಶ್ರೀಲಂಕಾವನ್ನು ದಯನೀಯ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯಲ್ಲಿ ನಿಲ್ಲಿಸಿವೆ.
ಶ್ರೀಲಂಕಾದ ಮುಖ್ಯ ಆದಾಯಗಳಲ್ಲೊಂದು ಪ್ರವಾಸೋದ್ಯಮವಾಗಿತ್ತು. ಅದರಲ್ಲೂ ವಿದೇಶಿ ಕರೆನ್ಸಿ ಜಮೆಯಾಗುವುದಕ್ಕೆ ಇದೇ ಮುಖ್ಯ ಮೂಲ. ಕೋವಿಡ್ ಹೊಡೆತದಲ್ಲಿ ಜಾಗತಿಕ ಪ್ರವಾಸೋದ್ಯಮವೇ ಬೋರಲು ಬಿದ್ದಿರುವಾಗ ಶ್ರೀಲಂಕಾ ಸಹ ಈ ನಿಟ್ಟಿನಲ್ಲಿ ಹೊಡೆತ ತಿಂದಿದೆ. 2019ರಿಂದ ಈವರೆಗೆ ಅಲ್ಲಿನ ರುಪಾಯಿ ಶೇ 20ರಷ್ಟು ಮೌಲ್ಯ ಕಳೆದುಕೊಂಡಿದೆ. ನವೆಂಬರ್ 2019ರಲ್ಲಿ ದೇಶದ ವಿದೇಶಿ ವಿನಿಮಯ ಕರೆನ್ಸಿ 7.5 ಬಿಲಿಯನ್ ಡಾಲರುಗಳಷ್ಟಿದ್ದದ್ದು ಈಗ 2.8 ಬಿಲಿಯನ್ ಡಾಲರುಗಳಿಗೆ ಕುಸಿದಿದೆ.
ಶ್ರೀಲಂಕಾ ಅಧ್ಯಕ್ಷ ಗೊಟಬಾಯಾ ರಾಜಪಕ್ಸ ತಮ್ಮ ದೇಶವನ್ನು ಜಗತ್ತಿನಲ್ಲೇ ಶೇ. 100ರಷ್ಟು ಸಾವಯವ ಉತ್ಪನ್ನ ದೇಶವಾಗಿ ಮಾಡುವುದಕ್ಕೆ ನಿರ್ಧರಿಸಿದರು. ಗುರಿಯೇನೋ ಉದಾತ್ತವೇ. ಆದರೆ ಇಂಥ ಯೋಜನೆಗಳನ್ನು ಹಂತ-ಹಂತವಾಗಿ ಅನುಷ್ಠಾನ ಮಾಡದೇ ಏಕಾಏಕಿ ನುಗ್ಗಿದರೆ, ಆವರೆಗೆ ರಾಸಾಯನಿಕ ಕೃಷಿ ಮಾಡಿಕೊಂಡು ಬಂದ ನೆಲ ಏಕಾಏಕಿ ಹೊಸ ಬದಲಾವಣೆಗೆ ಒಗ್ಗಲಾರದು. ಶ್ರೀಲಂಕಾದಲ್ಲಿ ಆಗಿದ್ದೂ ಅದೇ. ಅಲ್ಲಿನ ಮುಖ್ಯ ಚಹಾ ಬೆಳೆಯೂ ಸೇರಿದಂತೆ ಎಲ್ಲ ಕೃಷಿ ಉತ್ಪನ್ನಗಳಲ್ಲೂ ಇಳುವರಿ ಕಡಿಮೆಯಾಗಿ ಈಗ ಶ್ರೀಲಂಕಾ ಆಹಾರ ಕೊರತೆಯ ಆತಂಕ ಎದುರಿಸುತ್ತಿದೆ.
ಅಗತ್ಯ ವಸ್ತುಗಳಾದ ಅಕ್ಕಿ, ಸಕ್ಕರೆ, ಈರುಳ್ಳಿ, ಆಲೂಗಳ ಬೆಲೆ ಗಗನಕ್ಕೇರಿದೆ. ಹಾಲು, ಅಡುಗೆ ಅನಿಲ, ಸೀಮೆಎಣ್ಣೆ ಖರೀದಿಗಾಗಿ ಜನ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅಗತ್ಯ ವಸ್ತುಗಳನ್ನು ಯಾರೂ ಹೆಚ್ಚು ಪ್ರಮಾಣದಲ್ಲಿ ಶೇಖರಿಸಿಡದಂತೆ ನಿಗಾ ವಹಿಸುವುದಕ್ಕೆ ಸೇನೆಗೆ ಅಧಿಕಾರ ಕೊಡಲಾಗಿದೆ.