ಹೊಸದಿಗಂತ ವರದಿ ಬಳ್ಳಾರಿ:
ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಕಡಗೋಲು ಶ್ರೀಕೃಷ್ಣ ಸಮೇತ ಪಂಚವೃಂದಾವನ ಸನ್ನಿಧಾನ, ಶ್ರೀಮದುತ್ತರಾಧಿಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀ ಮಠದಲ್ಲಿ ಬೆಳಿಗ್ಗೆ ಶ್ರೀಕೃಷ್ಣನಿಗೆ ವಿಶೇಷ ಪೂಜೆ, ಅಲಂಕಾರ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ಶ್ರೀಮಠದ ಪ್ರಧಾನ ಅರ್ಚಕರಾದ ಪಂ.ನವೀನ್ ಆಚಾರ್, ಪಂ.ಪ್ರವೀಣ್ ಆಚಾರ್ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದವು.
ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಕಳೆದ ಆ.30ರಿಂದ ಇಲ್ಲಿವರೆಗೆ ಶ್ರೀಕೃಷ್ಣನಿಗೆ ಶೇಷ ವಾಹನ ಸೇವೆ, ಸಿಂಹ ವಾಹನ, ಗರುಡವಾಹನ, ವಾಯು ವಾಹನ, ಗಜ ವಾಹನ, ಸೀರ್ಯಪ್ರಭ ವಾಹನ, ಚಂದ್ರ ಪ್ರಭ ವಾಹನ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ಜರುಗಿದವು. ನಿತ್ಯ ಸಂಜೆ ವಿವಿಧ ಪಂಡಿತರಿಂದ ಉಪನ್ಯಾಸ ನಡೆಯಿತು.
ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ರಸಪ್ರಶ್ನೆ, ಶ್ರೀ ಹರಿಕಥಾಮೃತಸಾರ, ಮಂಗಳಾರತಿ, ಹೂ ಬತ್ತಿ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಅಂತ್ಯಾಕ್ಷರಿ, ಭರತನಾಟ್ಯ, ಮೋಹಕ ಉಡುಪುಗಳ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ನಿತ್ಯ ಸಂಜೆ ನಡೆದ ಶ್ರೀಕೃಷ್ಣನ ಭವ್ಯ ಉತ್ಸವ ನೋಡಿ ನಗರದ ಜನತೆ ಕಣ್ತುಂಬಿಕೊಂಡು, ಭಕ್ತಿ ಸಮರ್ಪಿಸಿದರು. ನಗರದ ಶ್ರೀ ಮಧ್ವ ಮಹಿಳಾ ಭಜನಾ ಮಂಡಳಿ, ಹೈಗ್ರೀವ ಭಜನಾ ಮಂಡಳಿ, ಶ್ರೀ ಮಧ್ವ ಸದನ ಭಜನಾ ಮಂಡಳಿ, ಅಪ್ರಮೇಯ ಭಜನಾ ಮಂಡಳಿ ಸದಸ್ಯರು ಶ್ರೀಕೃಷ್ಣನ ನಾಮ ಸ್ಮರಣೆ, ವಿವಿಧ ಹಾಡುಗಳನ್ನು ಪಠಿಸುವ ಮೂಲಕ ಉತ್ಸವದಲ್ಲಿ ಹೆಜ್ಜೆ ಹಾಕಿದರು.