ಶ್ರೀನಾರಾಯಣ ಗುರುಗಳ ಬಗ್ಗೆ ಪಾಠ ತೆಗೆದು ಹಾಕಲಾಗಿದೆ ಎಂಬ ಸುಳ್ಳು ಪ್ರಚಾರ ಖಂಡನೀಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ತಮ್ಮ ಎಲ್ಲ ಹುಳುಕುಗಳು ಹೊರಬೀಳುತ್ತವೆ ಎಂಬ ನೆಲೆಯಲ್ಲಿ ಎಡಪಂಥೀಯ ಗುಂಪು , ಈ ಬಗ್ಗೆ ಈಗ ಸುಳ್ಳು ಪ್ರಚಾರ ಮತ್ತು ವಿಷಯುಕ್ತ ಸುಳ್ಳನ್ನು ಹರಡಲು ಮುಂದಾಗಿರುವ ಬಗ್ಗೆ ಪ್ರಜ್ಞಾವಂತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಷ್ಕೃತ ಪಠ್ಯ ಕುರಿತಂತೆ ಸತ್ಯ ಮಾಹಿತಿ ತಿಳಿಯದೆಯೇ ಸುಳ್ಳು ಪ್ರಚಾರಕ್ಕೆ ಮಾಧ್ಯಮಗಳನ್ನು ಆಶ್ರಯಿಸಿರುವ ಮಂದಿಯ ನಡೆ ಯಥಾರ್ಥ ಚಿಂತನ-ಮಂಥನ ನಡೆಯುವುದಕ್ಕೆ ತಡೆ ಹಾಕುತ್ತಿದೆ ಎಂಬುದನ್ನು ಜನತೆ ಗಮನಿಸಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಉದಾಹರಣೆಗೆ ಶ್ರೀನಾರಾಯಣ ಗುರುಗಳ ಪಾಠವನ್ನು ತೆಗೆದುಹಾಕಲಾಗಿದೆ ಎಂಬ ಪ್ರಚಾರ ನಡೆದಿರುವುದನ್ನು ಉಲ್ಲೇಖಿಸಿರುವ ಚಿಂತಕರು, ಏಳನೆಯ ತರಗತಿಯ ಸಮಾಜ ವಿಜ್ಞಾನ ಭಾಗ 2 ರಲ್ಲಿ ನಾರಾಯಣ ಗುರುಗಳ ಬಗ್ಗೆಯೂ ಪಾಠವಿರುವುದನ್ನು ಬೊಟ್ಟು ಮಾಡಿದ್ದಾರೆ. ಮಾತ್ರವಲ್ಲದೆ 10ನೇ ತರಗತಿಯಲ್ಲಿದ್ದ ಶ್ರೀನಾರಾಯಣ ಗುರುಗಳ ಪಾಠವನ್ನು ಮಕ್ಕಳು ಮೂರು ವರ್ಷಗಳ ಮೊದಲೇ ಅಂದರೆ ಏಳನೇ ತರಗತಿಯಲ್ಲೇ ಕಲಿಯಲು ಅವಕಾಶ ಮಾಡಿಕೊಡಲಾಗಿದೆ.ಇದು ಸ್ವಾಗತಾರ್ಹವಲ್ಲವೇ?ಸತ್ಯ ಹೀಗಿದ್ದರೂ ಇಂತಹ ಸುಳ್ಳು ಪ್ರಚಾರದ ಹಿಂದಿರುವ ವ್ಯವಸ್ಥಿತ ಹುನ್ನಾರವನ್ನು ಅರಿಯದೆ ಈ ಬಗ್ಗೆ ಕೆಲವರು ಹೇಳಿಕೆಯನ್ನೂ ನೀಡಲು ಮುಂದಾಗಿರುವ ಬೆಳವಣಿಗೆಯೂ ನಡೆದಿದೆ.
ಅಷ್ಟೇ ಅಲ್ಲದೆ, ಹಿಂದು – ಮುಸ್ಲಿಮರ ನಡುವೆ ಸಾಮರಸ್ಯ ತರಲು ಪ್ರಯತ್ನ ಮಾಡಿದ ಸರ್ ಸೈಯದ್ ಅಹ್ಮದ್ ಖಾನ್ ಬಗ್ಗೆಯೂ ಪಾಠವಿದೆ. ಅಂದರೆ ನಿಜವಾದ ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಲಾಗಿದೆ ಎಂಬುದನ್ನು ಇದು ಸೂಚಿಸುತ್ತಿಲ್ಲವೇ? ಹೀಗಿದ್ದರೂ ಜನರ ಮನದಲ್ಲಿ ತಪ್ಪು ಮಾಹಿತಿಯನ್ನು ತುಂಬಲು ನಡೆಯುತ್ತಿರುವ ಯತ್ನದ ಹಿಂದಿರುವುದೇನು ಎಂಬ ಪ್ರಶ್ನೆ ಕೇಳಿಬಂದಿದೆ.
ಆದರೆ ತಮ್ಮ ಮೂಗಿನ ನೇರಕ್ಕೆ ಬರೆದುಕೊಂಡಿದ್ದ ಪಾಠ ಇಲ್ಲ ಎಂದು ರೋದಿಸುವ ಕೆಲವರ ಮಾತುಗಳನ್ನೇ ಕೆಲವು ಮಾಧ್ಯಮಗಳಲ್ಲಿ ಸತ್ಯ ಎಂಬಂತೆ ವರದಿಯಾಗಿರುವ ಬಗೆಗೂ ಚಿಂತಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇವಿಷ್ಟೇ ಅಲ್ಲದೆ, ಮಹಾದೇವ ಗೋವಿಂದ ರಾನಡೆ, ಜ್ಯೋತಿಬಾ ಫುಲೆ, ರಾಜಾ ರಾಮ ಮೋಹನ ರಾಯ್ ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ, ಸರ್ ಸೈಯದ್ ಅಹ್ಮದ್ ಖಾನ್ ಮತ್ತು ಶ್ರೀ ನಾರಾಯಣ ಗುರು ಇವರ ಜೀವನ ಚರಿತ್ರೆಯನ್ನು ಓದಲು ಭಾರತ ಭಾರತಿ ಪುಸ್ತಕ ಮಾಲೆಯನ್ನೂ ಈ ಪಾಠದ ಕೊನೆಯಲ್ಲಿ ಉಲ್ಲೇಖಿಸಲಾಗಿದೆ. ಈಗ ಯಾರ‍್ಯಾರು ತಕರಾರೆತ್ತಿ ವಿವಾದ ಸೃಷ್ಟಿಸಲು ಯತ್ನಿಸುತ್ತಿರುವ ಮಂದಿ ಎದ್ದೇಳುವ ಮುನ್ನವೇ ಅವರೆಲ್ಲ ಖಂಡಿಸುವ ರಾಷ್ಟ್ರೋತ್ಥಾನ ಸಾಹಿತ್ಯವು ಎಪ್ಪತ್ತರ ದಶಕದಲ್ಲೇ ಈ ಎಲ್ಲ ಮಹನೀಯರ, ಮಾತೆಯರ ಜೀವನ ಚರಿತ್ರೆಗಳನ್ನು ಸಂಶೋಧಿಸಿ, ಕನ್ನಡದ ಆಗಿನ ಸಾಹಿತಿ ದಿಗ್ಗಜರಿಂದಲೇ ಮಕ್ಕಳಿಗಾಗಿ ಪುಸ್ತಕಗಳನ್ನು ಪ್ರಕಟಿಸಿತ್ತು. ರಾಷ್ಟ್ರ ನಿರ್ಮಾಣದ ವ್ಯಕ್ತಿತ್ವಗಳು ಯಾರ ವೈಯಕ್ತಿಕ ಆಸ್ತಿಯೂ ಅಲ್ಲ. ಅವರು ಮತ್ತು ಅವರ ಚಿಂತನೆಗಳು ರಾಷ್ಟ್ರದ ಆಸ್ತಿ ಎಂಬುದನ್ನು ಅರ್ಥ ಮಾಡಿಕೊಂಡು ಜನತೆ ಈಗ ಇಂತಹ ಹುನ್ನಾರಗಳನ್ನು ತಿರಸ್ಕರಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!