ಶ್ರೀರಂಗಪಟ್ಟಣ ಮಸೀದಿ ಮೂಲತಃ ಹಿಂದೂ ದೇಗುಲ, ಪೂಜೆಗೆ ಅವಕಾಶ ನೀಡಿ: ಡಿಸಿಗೆ ಒತ್ತಾಯ

ಹೊಸದಿಗಂತ ವರದಿ, ಮಂಡ್ಯ
ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನಿಂದ ನಿರ್ಮಾಣವಾದ ಟಿಪ್ಪು ಮಸೀದಿ ಮಜಿದ್-ಎ ಆಲಾ ದಲ್ಲಿ ಮೂಲ ಹಿಂದೂ ದೇವರ ಮೂರ್ತಿಗಳು ಹಾಗೂ ಕೆತ್ತನೆಗಳು ಇದ್ದು, ಇಲ್ಲಿನ ಆಂಜನೇಯಸ್ವಾಮಿ ದೇವರಿಗೆ ಹಿಂದೂಗಳು ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ನರೇಂದ್ರಮೋದಿ ವಿಚಾರಮಂಚ್‌ನ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನರೇಂದ್ರಮೋದಿ ವಿಚಾರ ಮಂಚ್‌ನ ಕಾರ‌್ಯಕರ್ತರು, ಜಿಲ್ಲಾಧಿಕಾರಿ ಎಸ್. ಅಶ್ವತಿ ಅವರಿಗೆ ಮನವಿ ಸಲ್ಲಿಸಿ ಮಸೀದಿಯಲ್ಲಿ ಹಿಂದೂ ದೇವರಿಗೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಟಿಪ್ಪುವಿನ ಆಡಳಿತಾವಧಿಯಲ್ಲಿ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ದೇವಸ್ಥಾನವನ್ನು ಧ್ವಂಸ ಮಾಡಿ, ಸದರಿ ಕಟ್ಟಡವನ್ನು ಮಸೀದಿಯಾಗಿ ಪರಿವರ್ತನೆ ಮಾಡಿರುವ ಬಗ್ಗೆ ಅನೇಕ ಇತಿಹಾಸಕಾರರು ತಮ್ಮ ಹೇಳಿಕೆಗಳನ್ನು ಹಾಗೂ ದಾಖಲೆಗಳನ್ನು ಪ್ರಚುರಪಡಿಸಿರುತ್ತಾರೆ. ಲೂಯಿಸ್ ರೈಸ್‌ರವರ ಮೈಸೂರು ಗೆಜೆಟಿಯರ್, ಅರಮನೆ ನಡಾವಳಿಗಳು, ಶ್ರೀ ಮನ್ಮಮಹಾರಾಜ ಚರಿತ್ರೆ, ತಾರಿಕ್ ಎ-ಟಿಪ್ಪು ಹೇದರ್ ಇ ನಿಶಾನಿ ಹಾಗೂ ಸ್ವತಃ ಟಿಪ್ಪು ಪರ್ಶಿಯಾದ ಖಲೀನಿಗೆ ಬರೆದ ಪತ್ರಗಳು ಇದಕ್ಕೆ ಪುಷ್ಟಿ ನೀಡುತ್ತವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪುರಾತತ್ವ ಇಲಾಖೆ ವತಿಯಿಂದ ದಾಖಲೆಗಳನ್ನು ಪರಿಶೀಲಿಸಿ, ಜಿಲ್ಲಾಡಳಿತದ ವತಿಯಿಂದ ಬಹುಸಂಖ್ಯಾತ ಹಿಂದೂಗಳ ಆರಾಧ್ಯ ದೈವ ಶ್ರೀರಂಗಪಟ್ಟಣದ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ (ಈಗಿನ ಮಸೀದಿ) ಪೂಜೆ ಮಾಡಲು ಹಿಂದೂಗಳಿಗೆ ಕಾನೂನುಬದ್ಧವಾಗಿ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.
ನರೇಂದ್ರಮೋದಿ ವಿಚಾರ ಮಂಚ್‌ನ ಕಾರ‌್ಯಕರ್ತರಾದ ಸಿ.ಟಿ. ಮಂಜುನಾಥ್, ಹೊಸಹಳ್ಳಿ ಶಿವು, ಹನಿಯಂಬಾಡಿ ನಾಗರಾಜು, ಧಾರ್ಮಿಕ ಪರಿಷತ್ ಸದಸ್ಯ ನವೀನ್ ಹಾಗೂ ಮಂಜು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!