ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಯಾವುದೇ ಲೋಪದೋಷಗಳು ಆಗದಂತೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಸಿದ್ಧತೆ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲೆಯಲ್ಲಿ ಒಟ್ಟು 86 ಪರೀಕ್ಷಾ ಕೇಂದ್ರಗಳನ್ನು ನಿಗಧಿಪಡಿಸಲಾಗಿದ್ದು. ಕೋವಿಡ್ ಕಾರಣ ಹೆಚ್ಚವರಿಯಾಗಿ 28 ಹೊಸ ಕೇಂದ್ರಗಳನ್ನು ತೆರೆಯಲಾಗಿದೆ. ಅದರ ಜೊತೆಗೆ ಇನ್ನೂ 15 ಪರೀಕ್ಷಾ ಕೇಂದ್ರಗಳನ್ನು ಮೀಸಲಿರಿಸÀಲಾಗಿದೆ. ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಅಗತ್ಯ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ಲೋಪದೋಷಗಳಿಗೆ ಆಸ್ಪದ ನೀಡದಂತೆ ಪರೀಕ್ಷಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಆರೋಗ್ಯ ತಪಾಸಣಾ ಕೌಂಟರ್ ತೆರೆದು ಆಶಾ, ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಬೇಕು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್, ಅಥವಾ ಪಲ್ಸ್ ಆಕ್ಸಿಮೀಟರ್ ಮೂಲಕ ತಪಾಸಣೆ ನಡೆಸಬೇಕು, ಜ್ವರ, ಕೆಮ್ಮು, ಶೀತದಂತಹ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್, ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪರೀಕ್ಷಾ ಕೊಠಡಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು, ಪ್ರತಿ ಬೆಂಚ್ಗೆ ಒಬ್ಬರಂತೆ ಕನಿಷ್ಟ 2 ಮೀಟರ್ ಅಂತರ ವ್ಯವಸ್ಥೆ ಮಾಡಬೇಕು, ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಪ್ರತಿಯೊಂದು ಸಿಬ್ಬಂದಿಗಳು ಮೊದಲ ಆದ್ಯತೆಯಲ್ಲಿ ಲಸಿಕೆ ಪಡೆದಿರಬೇಕು ಆರೋಗ್ಯ, ಸಾರಿಗೆ, ಶಿಕ್ಷಣ ಇಲಾಖೆ ಒಳಗೊಂಡಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 1300 ಪರೀಕ್ಷಾ ಕೊಠಡಿಗಳನ್ನು ನಿಗಧಿಪಡಿಸಿದ್ದು, 1346 ಕೊಠಡಿ ಮೇಲ್ವಿಚಾರಕರು, 90 ಅಧೀಕ್ಷಕರು, 85 ಕಸ್ಟೋಡಿಯನ್, 90 ದೈಹಿಕ ಶಿಕ್ಷಣ ಶಿಕ್ಷಕರು, 90 ಕ್ಲಾರ್ಕ್, 85 ಸ್ಥಾನಿಕ ಜಾಗೃತದಳ, 200 ಆರೋಗ್ಯ ಸಹಾಯಕರು, 200 ಪೊಲೀಸರು, 40 ಇಲಾಖೆ ಸ್ವಾಡ್ಗಳು ಒಳಗೊಂಡಂತೆ ಒಟ್ಟು 2811 ಸಿಬ್ಬಂದಿಗಳನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮಲೆನಾಡು ಅಥವಾ ದೂರದೂರಿನಿಂದ ಬರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಅಥವಾ ಖಾಸಗಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಪರೀಕ್ಷೆಯಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲಾಯಿಸುವುದು, ಮುಂತಾದ ಪರೀಕ್ಷಾ ಅವ್ಯವಹಾರಗಳನ್ನು ತಡೆಗಟ್ಟಲು, ಹಾಗೂ ಪರೀಕ್ಷಾ ಕೇಂದ್ರದಲ್ಲಿ ಶಾಂತಿ ಸುವ್ಯವಸ್ಥೆಯಿಂದ ಕಾಪಾಡಲು ಪೊಲೀಸ್ ಇಲಾಖೆ ಸಹಕರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್, ಡಿಡಿಪಿಐ ಮಲ್ಲೇಶಪ್ಪ, ಅಭಿವೃದ್ದಿ ಅಧಿಕಾರಿ ನಾಗರಾಜ್, ಆರ್.ಟಿ.ಒ ಮುರುಗೇಂದ್ರಪ್ಪ ಶಿರೋಳ್ಕರ್, ಡಿಎಚ್ಒ ಡಾ.ಉಮೇಶ್, ಶಿಕ್ಷಣಾಧಿಕಾರಿ ಜಯಣ್ಣ ಹಾಗೂ ಎಲ್ಲಾ ತಾಲ್ಲೂಕುಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.