ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ನವೆಂಬರ್ 13ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು (ಬುಧವಾರ) ಪ್ರಕಟಿಸಿದೆ.
ಇದರೊಂದಿಗೆರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿರುವ ವಯನಾಡ್ ಕ್ಷೇತ್ರದಲ್ಲಿ ಮತ್ತೊಂದು ಚುನಾವಣೆಗೆ ವೇದಿಕೆ ಸಜ್ಜಾಗಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಹಾಗೂ ವಯನಾಡ್ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ರಾಹುಲ್, ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧರಿಸಿದ್ದರು.ವಯನಾಡ್ ಕ್ಷೇತ್ರದಿಂದ ರಾಹುಲ್ ಗಾಂಧಿ ಅವರ ತಂಗಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಇದರೊಂದಿಗೆ ಪ್ರಿಯಾಂಕಾ ಗಾಂಧಿ ತಮ್ಮ ಚೊಚ್ಚಲ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.
52 ವರ್ಷದ ಪ್ರಿಯಾಂಕಾ, ವಯನಾಡ್ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಶೇ 64.7ರಷ್ಟು ಮತ ಪಡೆದಿದ್ದರು. ಸಮೀಪದ ಸ್ಪರ್ಧಿ ಸಿಪಿಐನ ಅನ್ನಿ ರಾಜಾ ವಿರುದ್ಧ 3.64 ಲಕ್ಷಗಳ ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ 1.3ಲಕ್ಷ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪಿಪಟ್ಟುಕೊಂಡಿದ್ದರು.
ವಯನಾಡ್ ಉಪಚುನಾವಣೆಯ ಫಲಿತಾಂಶ ನವೆಂಬರ್ 23ರಂದು ಪ್ರಕಟಗೊಳ್ಳಲಿದೆ.